ಯಕ್ಷಗಾನ ಕಲಾವಿದರ ಬಗ್ಗೆ ನಾನು ಅವಮಾನ ಮಾಡಿಲ್ಲ, ಯಾರಿಗಾದರೂ ನನ್ನ ಹೇಳಿಕೆ ಬೇಸರ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಗ್ರಾಸವಾದ ಹಿನ್ನಲೆ ಪ್ರತಿಕ್ರಿಯಿಸಿದ್ದು, ತಮ್ಮ ಮಾತು ಹಿಂದಿನ ಕಾಲದ ಅನುಭವಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
ಯಕ್ಷಗಾನದಲ್ಲಿ ಸಲಿಂಗಕಾಮ ಇಲ್ಲ. 60–70ರ ದಶಕದಲ್ಲಿ ಮಾತ್ರ ಈ ರೀತಿಯ ಘಟನೆಗಳು ಇದ್ದವು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ” ಎಂದು ಬಿಳಿಮಲೆ ಹೇಳಿದ್ದಾರೆ. ಜೊತೆಗೆ, ಯಕ್ಷಗಾನದೊಂದಿಗೆ ತನ್ನ 30 ವರ್ಷಗಳ ನಂಟನ್ನು ಉಲ್ಲೇಖಿಸಿದ ಅವರು, ಕಲಾರೂಪದ ಮೇಲೆ ತನಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ವೇಳೆ ಬಿಳಿಮಲೆ ಅವರು, ತಮ್ಮ ವಿವಾದಿತ ಹೇಳಿಕೆಗಳನ್ನು ಮಾಡಿದ ಹಿನ್ನೆಲೆ ವಾದ-ವಿವಾದ ಉಂಟಾಗಿತ್ತು. ಆಗಿನ ಯಕ್ಷಗಾನ ಮೇಳಗಳಲ್ಲಿ ಕಲಾವಿದರಿಗೆ ಇದ್ದ ಒತ್ತಡ, ಪಾತ್ರ ವಹಿಸುವಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದು, ವಿಷಯಕ್ಕೆ ತೆರೆ ಬೀಳುವ ನಿರೀಕ್ಷೆ ಮೂಡಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

