ನವದೆಹಲಿ : ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ನಿರ್ಗಮಿಸುತ್ತಿರುವುದಾಗಿ ಸ್ಪೇಸ್ ಎಕ್ಸ್ ಒಡೆತನನದ ಬಿಲಿಯನೇರ್ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕವಷ್ಟೇ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆಯಿಂದ ಕೆಳಗೆ ಇಳಿದಿದಿದ್ದಾರೆ.
ಇನ್ನೂ ಈ ಕುರಿತು ತಮ್ಮದೇ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ ಅಂದರೆ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಅವಧಿ ಕೊನೆಗೊಂಡಿದೆ. ಅನಗತ್ಯ ವೆಚ್ಚಗಳನ್ನು ಕಡಿತ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ ಡಿಒಜಿಇ ಕಾಲಕ್ರಮೇಣ ಬಲಗೊಳ್ಳಲಿದ್ದು, ಸರ್ಕಾರದ ಕಾರ್ಯವಿಧಾನ ಭಾಗವಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.
ಟ್ರಂಪ್ ಮೇಲೆ ಎಲಾನ್ ಮಸ್ಕ್ಗೆ ಮುನಿಸೇಕೆ..?
ಪ್ರಮುಖವಾಗಿ ತೆರಿಗೆ ಬಿಲ್ಗೆ ಸಂಬಂಧಿಸಿದಂತೆ ಅಧ್ಯಕ್ಷ ಟ್ರಂಪ್ ಹಾಗೂ ಮಸ್ಕ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಬಿಲಿಯನೇರ್ ಹುದ್ದೆ ತೊರೆಯಲು ಮಸ್ಕ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಯಕ್ಕಿಂತ ಖರ್ಚು ಹೆಚ್ಚುವುದು ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು, ಅಲ್ಲದೆ ಇಲಾಖೆಯನ್ನು ದುರ್ಬಲಗೊಳಿಸಲಿದೆ ಎಂದು ಟ್ರಂಪ್ ತೀರ್ಮಾನದ ವಿರುದ್ಧ ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅಲ್ಲದೆ ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ ಡಿಒಜಿಇಯ ಉಸ್ತುವಾರಿಯಾಗಿ ನೇಮಿಸಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು.
ಸರ್ಕಾರಿ ದಕ್ಷತಾ ಇಲಾಖೆಯ ಮಖ್ಯಸ್ಥರಾಗಿ ಅಯ್ಕೆಯಾಗಿದ್ದ ಬಿಲಿಯನೇರ್..
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಪರ ಮತಯಾಚನೆ ಮಾಡಿದ್ದರು. ನಂತರ ಟ್ರಂಪ್ ಡಿಒಜಿಇ ಸರ್ಕಾರಿ ದಕ್ಷತೆ ಇಲಾಖೆಯ ಭಾಗವಾಗಿ ವಿಶೇಷ ಸರ್ಕಾರಿ ಇಲಾಖೆಯ ಮುಖ್ಯಸ್ಥರನ್ನಾಗಿ ಮಸ್ಕ್ ಅವರನ್ನು ನೇಮಕ ಮಾಡಿಕೊಂಡಿದ್ದರು. ಬಳಿಕ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿತ್ತು, ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ ಯುಎಸ್ಎಐಡಿ ಅಂತರಾಷ್ಟ್ರೀಯ ಅಭಿವೃದ್ದಿಯ ನಿಧಿಯನ್ನು ನಿಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಮಸ್ಕ್ ಗುರಿಯಾಗಿದ್ದರು.
ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ವಿಶೇಷ ಸರ್ಕಾರಿ ಉದ್ಯೋಗಿಯಾಗಿ ಎಲಾನ್ ಮಸ್ಕ್ ಅವರ 130 ದಿನಗಳ ಅಧಿಕಾರಾವಧಿ ಮೇ 30 ರ ಸುಮಾರಿಗೆ ಮುಕ್ತಾಯಗೊಳ್ಳಲಿದೆ. ಫೆಡರಲ್ ಸರ್ಕಾರವನ್ನು ಪುನರ್ರಚಿಸಲು ಡಿಒಜಿಇ ಪ್ರಯತ್ನಗಳು ಮುಂದುವರಿಯಲಿವೆ ಎಂದು ಟ್ರಂಪ್ ಆಡಳಿತ ಹೇಳಿದೆ.
ಟ್ರಂಪ್ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಮಸ್ಕ್..
ಅಲ್ಲದೆ ಮುಖ್ಯವಾಗಿ ಅಮೆರಿಕಾದಲ್ಲಿ ರಿಪಬ್ಲಿಕನ್ ಪಾರ್ಟಿ, ಡೆಮಾಕ್ರಟಿಕ್ ಪಕ್ಷವನ್ನು ಮಣ್ಣು ಮುಕ್ಕಿಸಿ ಸ್ಪಷ್ಟ ಬಹುಮತದ ವಿಜಯದೊಂದಿಗೆ ಟ್ರಂಪ್ ಕೇಕೆ ಹಾಕಲು ಇದೇ ಮಸ್ಕ್ ಕಾರಣರಾಗಿದ್ದರು. ಡೊನಾಲ್ಡ್ ಟ್ರಂಪ್ ವಿಜಯ ಅವರ ಒಂದು ಗಾಢವಾದ ಸ್ನೇಹವನ್ನು ಚರ್ಚೆಯ ಮುನ್ನೆಲೆಗೆ ತಂದಿತ್ತು. ಟೆಸ್ಲಾದ ಸಂಸ್ಥಾಪಕ ಇದೇ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ಗೆ ಈ ಚುನಾವಣೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಹೆಜ್ಜೆ ಹೆಜ್ಜೆಗೂ ಟ್ರಂಪ್ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದರು. ಅಧ್ಯಕ್ಷರಾದ ವೇಳೆ ಮಾತನಾಡಿದ್ದ ಎಲಾನ್ ಮಸ್ಕ್ ಅಮೆರಿಕಾದ ಮುಂದಿನ ದಿನಗಳು ಅದ್ಭುತವಾಗಿ ಸಾಗಲಿದೆ ಎಂದು ಎಂದ ಹೇಳುವ ಮೂಲಕ ಟ್ರಂಪ್ ಗೆಲುವನ್ನು ಸಂಭ್ರಮಿಸಿದ್ದರು.
ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಈ ಬಾರಿಯ ಯುಎಸ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ದೊಡ್ಡದಾಗಿ ಬೆಂಬಲ ನೀಡಿದ್ದರು. ಅವರು ಪದೇ ಪದೇ ತಮ್ಮ ಎಕ್ಸ್ ಖಾತೆಯಲ್ಲಿ ಅಮೆರಿಕಾದ ಜನ ಯಾಕೆ ಡೊನಾಲ್ಡ್ ಟ್ರಂಪ್ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪೋಸ್ಟ್ ಹಾಕುತ್ತಿದ್ದರು.
2022ರಲ್ಲಿ ಟ್ವಿಟರ್ ಎಕ್ಸ್ ಎಂಬ ನಾಮಪದವನ್ನು ಹೊತ್ತುಕೊಂಡು ಜಗತ್ತಿನ ಎದುರಿಗೆ ಬಂದಾಗ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರ ಗಾಢ ಸ್ನೇಹ ಆರಂಭವಾಯ್ತು. ಎಕ್ಸ್ ಖಾತೆ ಶುರುವಾದಾಗ ಎಲಾನ್ ಮಸ್ಕ್ ಮಾಡಿದ ಮೊದಲ ಕೆಲಸವೆಂದರೆ ಬ್ಯಾನ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನ ರಿಸ್ಟೋರ್ ಮಾಡಿದ್ದು. ಈ ವೇಳೆ ಅವರು ಶೇಕಡಾ 51.8 ಅಂದ್ರೆ 1 ಕೋಟಿ 50 ಲಕ್ಷ ಎಕ್ಸ್ ಖಾತೆ ಬಳಕೆದಾರರು ಡೊನಾಲ್ಡ್ ಟ್ರಂಪ್ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆಯಬೇಕು ಎಂದು ಕೇಳಿಕೊಂಡಿದ್ದರು ಈ ಕಾರಣದಿಂದಾಗಿ ಟ್ರಂಪ್ ಅವರ ಅಕೌಂಟ್ನ್ನು ರಿಸ್ಟೋರ್ ಮಾಡಲಾಗಿದೆ ಎಂದು ಹೇಳಿದ್ದರು. ಬಳಿಕ ಟ್ರಂಪ್ ಅವರೊಂದಿಗೆ ಮಸ್ಕ್ ಮತ್ತಷ್ಟ ಹತ್ತಿರವಾಗಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಟ್ರಂಪ್ ಆಡಳಿತಕ್ಕೆ ಅವರು ಗುಡ್ ಬೈ ಹೇಳಿರುವುದು ಅಚ್ಚರಿ ಮೂಡಿಸಿದೆ.