ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಇನ್ನೂ ಅಂತಿಮಗೊಳ್ಳದಿರುತ್ತಲೇ ಬಿಜೆಪಿ ಮೊದಲಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿ ಗಮನಸೆಳೆದಿದೆ. ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಪ್ರಮೋದ್ ಕುಮಾರ್ ಗೆ ಈಗ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಈ ಘೋಷಣೆಯನ್ನು ಮೋತಿಹಾರಿಯಲ್ಲಿ ನಡೆದ ಎನ್‌ಡಿಎ ಕಾರ್ಯಕರ್ತರ ಸಭೆಯ ವೇಳೆ ಪ್ರಕಟಿಸಲಾಯಿತು. ಸಭೆಯಲ್ಲಿ ಪ್ರಮುಖ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪ್ರಮೋದ್ ಕುಮಾರ್ ಅವರ ಗೆಲುವು ಎನ್‌ಡಿಎ ಮೈತ್ರಿಕೂಟದ ಬಲವರ್ಧನೆಗೆ ಬಹುಮುಖ್ಯವಾಗಿದೆ ಎಂದು ಹೇಳಿದ್ದಾರೆ.
63 ವರ್ಷದ ಪ್ರಮೋದ್ ಕುಮಾರ್, 2005ರಿಂದ ಮೋತಿಹಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ಅವರು ವಿವಿಧ ಜನಪರ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಜನತೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ನಾಯಕ ಎಂದು ಮುಖಂಡರು ಶ್ಲಾಘಿಸಿದ್ದಾರೆ.
ಇದೇ ಸಂದರ್ಭದಲ್ಲಿ JDU ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ತಮ್ಮ ಅಭ್ಯರ್ಥಿಯನ್ನು ಘೋಷಿಸಿರುವುದು ಗಮನಾರ್ಹ. ಅವರು ಬಕ್ಸಾರ್ ಜಿಲ್ಲೆಯ ರಾಜ್‌ಪುರ ಕ್ಷೇತ್ರದಿಂದ ಸಂತೋಷ್ ಕುಮಾರ್ ನಿರಾಲಾ ಅವರನ್ನು JDU ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಸಂತೋಷ್ ನಿರಾಲಾ, ನಿತೀಶ್ ಕುಮಾರ್ ನೇತೃತ್ವದ ಸಂಪುಟದಲ್ಲಿ ಹಿಂದೆಯೂ ಸಚಿವರಾಗಿದ್ದರು.
ಇನ್ನು ವಿರೋಧ ಪಕ್ಷವು ಸುಳ್ಳು ಆರೋಪಗಳ ಮೂಲಕ ಮತದಾರರಲ್ಲಿ ಗೊಂದಲ ಉಂಟುಮಾಡುತ್ತಿದೆ. ಆದರೆ ಬಿಹಾರದ ಜನತೆ ಈಗಾಗಲೇ ಅಭಿವೃದ್ಧಿ ಯಜ್ಞದಲ್ಲಿ ಎನ್‌ಡಿಎ ಮೇಲೆ ವಿಶ್ವಾಸವಿಟ್ಟು ಮುಂದೆ ಸಾಗುತ್ತಿದ್ದಾರೆ. ಪ್ರತಿ ಸ್ಥಾನವೂ ಬಿಹಾರದ ಭವಿಷ್ಯ ನಿರ್ಧರಿಸುವಂತದ್ದು ಎಂದು ಸಚಿವ ಮಂಗಲ್ ಪಾಂಡೆ ಹೇಳಿದರು.
ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ಬಿಜೆಪಿಯು JDU, LJP ಮತ್ತು HAM ಪಕ್ಷಗಳೊಂದಿಗೆ ಹಂಚಿಕೊಂಡಿದೆ. ಸೀಟು ಹಂಚಿಕೆ ಕುರಿತ ಚರ್ಚೆಗಳು ಇನ್ನೂ ನಡೆಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಹೊರಬೀಳುವ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ