ಪುಣೆಯ ಐತಿಹಾಸಿಕ ಶನಿವಾರವಾಡ ಕೋಟೆಯಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಸಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರಾಜಕೀಯ ಕೋಲಾಹಲ ಉಂಟಾಗಿದೆ. ಈ ಘಟನೆಯ ನಂತರ ಬಿಜೆಪಿ ನಾಯಕರು ನಮಾಜ್ ನಡೆದ ಸ್ಥಳದಲ್ಲಿ ಸಗಣಿ ಸುರಿದು, ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ನಡೆಸಿದ್ದಾರೆ. ಈ ಕ್ರಮ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಂಸದೆ ಮೇಧಾ ಕುಲಕರ್ಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಐತಿಹಾಸಿಕ ಶನಿವಾರವಾಡ ಕೋಟೆಯಲ್ಲಿ ನಮಾಜ್ ನಡೆದಿರುವುದು ಕಳವಳಕಾರಿ ವಿಚಾರ. 1732ರಲ್ಲಿ ನಿರ್ಮಿಸಲಾದ ಈ ಕೋಟೆ 1818ರವರೆಗೆ ಮರಾಠಾ ಸಾಮ್ರಾಜ್ಯದ ಪೇಶ್ವೆಗಳ ಆಡಳಿತ ಕೇಂದ್ರವಾಗಿತ್ತು. ಇಂತಹ ಪರಂಪರೆಯ ತಾಣಗಳಲ್ಲಿ ಇಂಥ ಘಟನೆಗಳು ನಡೆಯುವುದು ದುಃಖಕರ. ಪುಣೆ ಆಡಳಿತ ಏನು ಮಾಡುತ್ತಿದೆ? ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಗೌರವ ಎಲ್ಲಿ ಕಣ್ಮರೆಯಾಗಿದೆ? ಬನ್ನಿ, ನಾವೆಲ್ಲರೂ ಒಗ್ಗೂಡಿ ನಮ್ಮ ಪರಂಪರೆಯನ್ನು ಕಾಪಾಡೋಣ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆಯ ಬಳಿಕ ಬಿಜೆಪಿ ಕಾರ್ಯಕರ್ತರು ಮೇಧಾ ಕುಲಕರ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಶನಿವಾರವಾಡದೊಳಗಿನ ನಮಾಜ್ ನಡೆದ ಸ್ಥಳದಲ್ಲಿ ಗೋಮೂತ್ರ ಮತ್ತು ಸಗಣಿ ಸಿಂಪಡಿಸಿ ಶುದ್ಧೀಕರಣ ವಿಧಿ ನೆರವೇರಿಸಿದರು. ಈ ಘಟನೆ ಬಳಿಕ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಭಾರೀ ಚರ್ಚೆ ಜೋರಾಗಿದೆ. ಶುದ್ಧೀಕರಣದ ನಂತರ ಮೇಧಾ ಕುಲಕರ್ಣಿ ಮಾತನಾಡಿ, ಐತಿಹಾಸಿಕ ಶನಿವಾರವಾಡದಲ್ಲಿ ಮುಸ್ಲಿಮರು ನಮಾಜ್ ಸಲ್ಲಿಸಿದರೆ, ಹಿಂದೂಗಳಿಗೂ ಮಸೀದಿಗಳಲ್ಲಿ ಆರತಿ ಮಾಡಲು ಅವಕಾಶ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌ನ ವಕ್ತಾರ ಅತುಲ್ ಲೋಂಧೆ ಹೇಳಿದರು, ಮರಾಠವಾಡದ ರೈತರು ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ಪರಿಹಾರ ನೀಡುವ ಬದಲು ಬಿಜೆಪಿ ನಾಯಕರು ದ್ವೇಷ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಜನರ ನಿಜವಾದ ಸಮಸ್ಯೆಗಳನ್ನು ಬದಿಗಿಟ್ಟು ಧಾರ್ಮಿಕ ವಿಷಯಗಳಿಂದ ಗಮನ ಬೇರೆಡೆ ತಿರುಗಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಾಮಾಜಿಕ ಕಾರ್ಯಕರ್ತ ಮಾನವ್ ಕಾಂಬ್ಳೆ ಕೂಡ ಮೇಧಾ ಕುಲಕರ್ಣಿಯ ವರ್ತನೆಯನ್ನು ಖಂಡಿಸಿ, ಬಾಜಿರಾವ್ ಪೇಶ್ವೆಯ ಕಾಲದಲ್ಲಿ ಶನಿವಾರವಾಡದಲ್ಲಿ ಮುಸ್ಲಿಂ ಮಹಿಳೆಯರು ವಾಸಿಸುತ್ತಿದ್ದರು. ಇತಿಹಾಸ ಓದಿದ್ದರೆ ಮೇಧಾ ಕುಲಕರ್ಣಿಯವರು ಇಂತಹ ಮಾತು ಆಡುತ್ತಿರಲಿಲ್ಲ. ಇಡೀ ಕೋಟೆಯನ್ನು ಶುದ್ಧೀಕರಿಸಲಿದ್ದಾರೆಯೇ? ಈ ಕೃತ್ಯ ಖಂಡನೀಯ. ಅವರು ಸಂಸದೆ ಸ್ಥಾನಕ್ಕೆ ಯೋಗ್ಯರಲ್ಲ. ತಾವಾಗಿಯೇ ರಾಜೀನಾಮೆ ನೀಡುವುದು ಒಳಿತು ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ