ಬೆಂಗಳೂರು: ಇನ್ನು ಕೆಲವೇ ನಿಮಿಷಗಳಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಲಿರುವ ಮಧ್ಯೆ ರಾಜ್ಯ ಮತ್ತೊಂದು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಪಕ್ಷೇತರ ಶಾಸಕರನ್ನು ತಮ್ಮ ಪರ ಮತ ಚಲಾಯಿಸಲು ಬಿಜೆಪಿ ಮುಖಂಡರು ಮುಂಬೈನಿಂದ ಬೆಂಗಳೂರಿಗೆ ಕರೆದಂತಿರುವ ಹಿನ್ನೆಲೆಯಲ್ಲಿ ಪಕ್ಷೇತರರು ತಂಗಿರುವ ಅಪಾರ್ಟ್ ಮೆಂಟ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ.
ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ರನ್ನು ಸದನಕ್ಕೆ ಹಾಜರುಪಡಿಸುವ ನಿಟ್ಟಿನಲ್ಲಿ ಬಿಜೆಪಿ ಅವರನ್ನು ಬೆಂಗಳೂರಿಗೆ ಕರೆತಂದಿದೆ. ಈ ಸುದ್ದಿ ತಿಳಿದ ಕೈ ಕಾರ್ಯಕರ್ತರು ಮುಖಂಡರೊಂದಿಗೆ ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿರುವ ನಿತೇಶ್ ಅಪಾರ್ಟ್ ಮೆಂಟ್ ಗೆ ನುಗ್ಗಲೆತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಅವರನ್ನು ತಡೆಯುವ ಯತ್ನ ಮಾಡಿದಾಗ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ಕೂಡ ಏರ್ಪಟ್ಟಿತು.
ಇನ್ನು ಕಾಂಗ್ರೆಸ್ ನಿಂದ ಈ ಇಬ್ಬರು ಶಾಸಕರಿಗೆ ಖಡ್ಡಾಯವಾಗಿ ಸದನಕ್ಕೆ ಹಾಜರಾಗಿ ಸರ್ಕಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿಯಾಗಿದೆ ಈ ಮಧ್ಯೆ ಬಿಜೆಪಿ ಪಕ್ಷೇತರ ಶಾಸಕರನ್ನು ತಮ್ಮ ಪರ ಮತ ಹಾಕುವಂತೆ ಸೂಚಿಸಿದೆ. ಇದು ಬಿಜೆಪಿ-ಕೈ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಹರಸಾಹಸ ಪಡಬೇಕಾಯ್ತು. ಈ ಎಲ್ಲಾ ಬೆಳವಣಿಗೆಗೆಳ ಮಧ್ಯೆ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಸದನಕ್ಕೆ ಹಾಜರಾಗಬೇಕಾಗಿರುವ ಅನಿವಾರ್ಯತೆ ಎದುರಾಗಿದೆ.