‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ ಅಂತ ನಾನು ಹೇಳುವುದಿಲ್ಲ. ಆದರೆ, ಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ’ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಪಕ್ಷದ ಬೂತ್ ಹಂತದ ಚುನಾವಣೆಗಳು ಈಗಾಗಲೇ ಪೂರ್ಣಗೊಂಡಿದೆ. ಮಂಡಲ ಹಂತದ ಚುನಾವಣೆಗಳು ನಡೆಯುತ್ತಿವೆ. ಆ ಬಳಿಕ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ನಡೆಯುತ್ತದೆ. ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಚುನಾವಣೆ ಮೂಲಕ ಆಯ್ಕೆಯಾಗಿದ್ದಲ್ಲ. ಚುನಾವಣೆಯಲ್ಲಿ ಈಗಿನ ಅಧ್ಯಕ್ಷರೇ ಮತ್ತೊಮ್ಮೆ ಆಯ್ಕೆಯಾಗಲೂಬಹುದು’ ಎಂದರು.
ಇನ್ನು ‘ಕಾಂಗ್ರೆಸ್‌ನವರಂತೆ ಕಾಗದದಲ್ಲಿ ತೋರಿಸುವುದಕ್ಕಾಗಿ ಮಾತ್ರ ನಾವು ಪಕ್ಷದ ಆಂತರಿಕ ಚುನಾವಣೆ ನಡೆಸುವುದಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಸುತ್ತೇವೆ. ಕೇಂದ್ರ ಸಚಿವರಿಗೆ ಒಂದೊಂದು ರಾಜ್ಯದ ಚುನಾವಣೆಯ ಉಸ್ತುವಾರಿ ವಹಿಸಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನಮ್ಮ ರಾಜ್ಯದ ಉಸ್ತುವಾರಿಯನ್ನಾಗಿ ಹಾಗೂ ನನ್ನನ್ನು ಕೇರಳದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ’ ಎಂದರು.
‘ರಾಜ್ಯ ಸರ್ಕಾರದ ದುರಡಳಿತದ ವಿರುದ್ಧ ಪಕ್ಷವು ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ. ಪಕ್ಷದೊಳಗೆ ಏನೇ ಬಿಕ್ಕಟ್ಟುಗಳಿದ್ದರೂ ಅದನ್ನು ನಿವಾರಿಸಲು ವ್ಯವಸ್ಥೆ ಇದೆ. ಕೆಲವೊಮ್ಮೆ ಪ್ರಯತ್ನಗಳಿಗೆ ಫಲ ಸಿಗುವಾಗ ಸ್ವಲ್ಪ ತಡವಾಗುತ್ತದೆ ಅಷ್ಟೆ’ ಎಂದರು.