ಬೆಂಗಳೂರು : ತಮ್ಮ ರಾಜ್ಯದಲ್ಲಿ ನಡೆದ ಬಿಜೆಪಿ ಅಧ್ಯಕ್ಷರ ಆಯ್ಕೆಯ ಕುರಿತು ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡಿದ್ದ ತೆಲಂಗಾಣದ ಗೋಶಾಮಹಲ್ ಶಾಸಕ ಟಿ. ರಾಜಾ ಸಿಂಗ್ ಅವರಿಗೆ ಶಾಕ್ ಎದುರಾಗಿದೆ. ತಮ್ಮ ರಾಜೀನಾಮೆ ಅಂಗೀಕರಿಸಿ ಎಂದು ಪತ್ರ ಬರೆದಿದ್ದ ಶಾಸಕನಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ, ನಡ್ಡಾ ಈ ಮೂಲಕ ದೊಡ್ಡ ಆಘಾತವನ್ನೇ ನೀಡಿದ್ದಾರೆ.
ನಿರಂತರವಾಗಿ ಬಿಜೆಪಿ, ಹಿಂದುತ್ವ ಎಂದು ಪ್ರಖರವಾದ ಮಾತುಗಳಿಂದ ಜನರ ಪ್ರೀತಿ ಪಡೆದಿದ್ದ ರಾಜಾ ಸಿಂಗ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಬಿಜೆಪಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಅವರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಕಣ್ಣೀಟ್ಟಿದ್ದರು. ಅಲ್ಲದೆ ಆ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದರು.
ಆದರೆ ಬಿಜೆಪಿ ಹೈಕಮಾಂಡ್ ಆ ಜಾಗಕ್ಕೆ ಎನ್. ರಾಮಚಂದ್ರರಾವ್ ಅವರನ್ನು ನೇಮಕ ಮಾಡಿರುವ ಬಗ್ಗೆ ತಮ್ಮ ಪತ್ರದಲ್ಲಿ ಬೇಸರ ಹೊರಹಾಕಿದ್ದರು. ನೂತನ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಮಾಧ್ಯಮ ವರದಿಗಳಿಂದ ತಿಳಿದುಕೊಂಡಿದ್ದೇನೆ. ಈ ನಿರ್ಧಾರ ನನಗೆ ಮಾತ್ರವಲ್ಲ, ಪಕ್ಷದ ಜೊತೆ ಇರುವ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ರಾಜಾ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇನ್ನೂ ಕಳೆದ ಜೂನ್ ತಿಂಗಳ 30 ರಂದು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವ ನಡ್ಡಾ, ಅದರಲ್ಲಿ ಹೇಳಿರುವ ಕಾರಣಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ರಾಜಾ ಸಿಂಗ್ ಅವರಿಗೂ ಪತ್ರವನ್ನು ಬರೆದಿದ್ದಾರೆ. ಆದರೆ ಅದರಲ್ಲಿಯ ಪ್ರಮುಖ ಅಂಶಗಳನ್ನು ನೋಡುವುದಾದರೆ, ನಮಸ್ಕಾರ, ಇದು ಬಿಜೆಪಿ ತೆಲಂಗಾಣ ರಾಜ್ಯ ಅಧ್ಯಕ್ಷರಾದ ಜಿ. ಕಿಶನ್ ರೆಡ್ಡಿ ಅವರಿಗೆ ನೀವು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಜೂನ್ 30, 2025 ರಂದು ಬರೆದ ಪತ್ರ ಸಂಖ್ಯೆ 1041 ರಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಪತ್ರವನ್ನು ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ಗಮನಕ್ಕೆ ತರಲಾಗಿದೆ. ಅಂತೆಯೇ, ‘ನೀವು ಉಲ್ಲೇಖಿಸಿರುವ ವಿಷಯಗಳು ಅಪ್ರಸ್ತುತವಾಗಿವೆ ಮತ್ತು ಪಕ್ಷದ ಕಾರ್ಯವೈಖರಿ, ಸಿದ್ಧಾಂತ ಮತ್ತು ತತ್ವಗಳಿಗೆ ವಿರುದ್ಧವಾಗಿವೆ. ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ನಿರ್ದೇಶನದ ಪ್ರಕಾರ, ನಿಮ್ಮ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಅಂತ ನಾನು ತಿಳಿಸುತ್ತೇನೆ ಎಂದು ಅರುಣ್ ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಮುಖ್ಯವಾಗಿ ರಾಜಾ ಸಿಂಗ್ ಅವರ ರಾಜೀನಾಮೆಯಿಂದ ತೆಲಂಗಾಣದ ಬಿಜೆಪಿಯಿಂದ ಹಿಂದುತ್ವದ ಮತಗಳು ಅಂತರ ಕಾಯ್ದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಬಿಜೆಪಿ ಹೈಕಮಾಂಡ್ ತಪ್ಪು ಹೆಜ್ಜೆ ಇಟ್ಟಿತಾ ಎನ್ನುವ ಪ್ರಶ್ನೆಗಳು ಮೂಡಿವೆ.