ಕಾಂಗ್ರೆಸ್‌ನ 20 ವರ್ಷಗಳ ಆಡಳಿತ ಅವಧಿಯಲ್ಲಿ ಅಸ್ಸಾಂ ರಾಜ್ಯದ ಜನಸಂಖ್ಯಾ ರಚನೆ ಬದಲಾಗಿದ್ದು, ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 64 ಲಕ್ಷ ನುಸುಳುಕೋರರು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಕರೆಂಗ್ ಚಾಪೋರಿಯಲ್ಲಿ ಟಕಮ್ ಮಿಸಿಂಗ್ ಪೋರಿನ್ ಕೆಬಾಂಗ್ ಆಯೋಜಿಸಿದ್ದ 10ನೇ ಮಿಸಿಂಗ್ ಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಒಳನುಸುಳುವಿಕೆಯನ್ನು ತಡೆಯಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸ್ಪಷ್ಟಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವಂತೆ ಜನರಿಗೆ ಮನವಿ ಮಾಡಿದ ಅಮಿತ್ ಶಾ, “ಅಸ್ಸಾಂನಲ್ಲಿ ಅಕ್ರಮ ವಲಸೆಯನ್ನು ನಿಲ್ಲಿಸಬೇಕೆಂದಿದ್ದರೆ ಮೂರನೇ ಅವಧಿಗೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಅಕ್ರಮ ವಲಸಿಗರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈಗಳನ್ನು ಬಲಪಡಿಸಬೇಕು,” ಎಂದು ಹೇಳಿದರು.
ಇದೇ ವೇಳೆ, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಸ್ಸಾಂನಲ್ಲಿ ಒಳನುಸುಳುವವರ ಅತಿಕ್ರಮಣದಿಂದ 1.26 ಲಕ್ಷ ಎಕರೆ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವರದಿ : ಲಾವಣ್ಯ ಅನಿಗೋಳ




