ಬಿಜೆಪಿ–ಜೆಡಿಎಸ್ ರಹಸ್ಯ ತಂತ್ರ: ಅಧಿವೇಶನದ ‘ಸೀಕ್ರೆಟ್’ ಹೈಲೈಟ್ಸ್!

ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ಆರಂಭವಾಗುತ್ತಿರುವ ಚಳಿಗಾಲದ ಅಧಿವೇಶನ ರಾಜಕೀಯವಾಗಿ ತೀವ್ರ ಕಾದಾಟಕ್ಕೆ ವೇದಿಯಾಗಲಿದೆಯೆಂಬ ಸೂಚನೆಗಳು ಸ್ಪಷ್ಟವಾಗಿವೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಹಲವು ಪ್ರಮುಖ ವಿಧೇಯಕಗಳ ಮಂಡನೆ ಜೊತೆಗೆ, ಸರ್ಕಾರ ಮತ್ತು ವಿಪಕ್ಷಗಳ ನಡುವೆ ಗಟ್ಟಿಯಾದ ಮುಖಾಮುಖಿ ಎದುರಾಗುವ ಸಾಧ್ಯತೆವಿದೆ. ಬೆಳಗಾವಿಯ ಚಳಿಯ ನಡುವೆ ಸದನದ ರಾಜಕೀಯ ತಾಪಮಾನ ಗರಿಷ್ಠ ಮಟ್ಟಿಗೆ ಏರಲಿದ್ದು, ಈ ಬಾರಿ ನಡೆಯುವ ಚರ್ಚೆಗಳು, ಪ್ರತಿಭಟನೆಗಳು ಮತ್ತು ರಾಜಕೀಯ ತಂತ್ರಗಳು ದೊಡ್ಡ ಕುತೂಹಲವನ್ನು ಸೃಷ್ಟಿಸಿವೆ.

ಬಿಜೆಪಿ–ಜೆಡಿಎಸ್ ಮೈತ್ರಿ ಈ ಬಾರಿ ಸರ್ಕಾರದ ಮೇಲೆ ಪ್ರಬಲ ದಾಳಿ ನಡೆಸಲು ನಿರ್ಧರಿಸಿದ್ದು, ವಿಶೇಷವಾಗಿ ರೈತರ ಸಮಸ್ಯೆಗಳನ್ನು ಮುಖ್ಯವಾಗಿ ಎತ್ತಿಹಿಡಿಯಲಿದೆ. ಕಬ್ಬು ದರ, ಮೆಕ್ಕೆ ಜೋಳ ಖರೀದಿ ಕೇಂದ್ರಗಳ ಸ್ಥಾಪನೆಯಲ್ಲಿ ವಿಳಂಬ, ನೀರಾವರಿ ಸಮಸ್ಯೆಗಳು, ಅತಿವೃಷ್ಟಿ ಪರಿಹಾರ ಇವುಗಳ ಕುರಿತು ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ಬೃಹತ್ ಪ್ರತಿಭಟನೆ ರೂಪಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಕಾರ, ಡಿಸೆಂಬರ್ 9ರಂದು 15ರಿಂದ 20 ಸಾವಿರ ರೈತರೊಂದಿಗೆ ಸುವರ್ಣಸೌಧ ಮುತ್ತಿಗೆ ನಡೆಸುವ ಯೋಜನೆ ಕೈಗೊಳ್ಳಲಾಗಿದೆ. ಸದನ ಎರಡನೇ ದಿನವೇ ಈ ಹೋರಾಟ ರಾಜಕೀಯ ತಾಪಮಾನವನ್ನು ಹೆಚ್ಚಿಸಲಿದೆ. ಈ ಅಧಿವೇಶನ ಕಾಂಗ್ರೆಸ್ ಸರ್ಕಾರದ ಒಳಗಿನ ನಾಯಕತ್ವ ಹಗ್ಗಜಗ್ಗಾಟದ ಮಧ್ಯೆ ನಡೆಯುತ್ತಿರುವುದರಿಂದ ರಾಜಕೀಯ ಕುತೂಹಲ ಹೆಚ್ಚಾಗಿದೆ. ಪಕ್ಷದ ಶಾಂತಿ–ಒಗ್ಗಟ್ಟು ಪ್ರದರ್ಶನಕ್ಕೆ ತೀವ್ರ ಒತ್ತಡ ಎದುರಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಕೇಳಿಬರುತ್ತಿರುವ ಕಮಿಷನ್ ಆರೋಪ, ಭ್ರಷ್ಟಾಚಾರ ಚರ್ಚೆ, ಹಾಗೂ ಶಾಸಕರಿಗೆ ಅನುದಾನದಲ್ಲಿನ ಕೊರತೆ ವಿಚಾರಗಳು ಸಭೆಯಲ್ಲಿ ಸರ್ಕಾರಕ್ಕೆ ತಲೆನೋವು ಉಂಟುಮಾಡುವ ಹಿನ್ನಲೆಯಲ್ಲಿ ಪರಿಣತರು ಗಮನ ಹರಿಸಿದ್ದಾರೆ. ಇನ್ನು ಈ ಬಾರಿ ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆ, ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ, ನಾಯಕತ್ವ ಬದಲಾವಣೆ ಗೊಂದಲ, ಶಾಸಕರಿಗೆ ಅನುದಾನ ಕೊರತೆ, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿರುವ ಬಗ್ಗೆ ಚರ್ಚೆಗೆ ಬರಲಿರುವ ಪ್ರಮುಖ ವಿಷಯಗಳಾಗಿವೆ.

ಬೆಳಗಾವಿಯ ಚಳಿಗಾಲದ ಅಧಿವೇಶನ ಈ ಬಾರಿ ಸರಳ ಸಭೆಯಾಗುವುದಿಲ್ಲ. ವಿಪಕ್ಷ–ಆಡಳಿತ ಪಕ್ಷಗಳ ತಂತ್ರ–ಪ್ರತಿತಂತ್ರಗಳು, ಒಳಘರ್ಷಣೆಗಳು, ರೈತರ ಹೋರಾಟ, ಅಭಿವೃದ್ಧಿ ಚರ್ಚೆಗಳು ಮತ್ತು ಭ್ರಷ್ಟಾಚಾರ ಆರೋಪಗಳ ನಡುವೆ, ಈ ಅಧಿವೇಶನ ತೀವ್ರ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದೆ. ರಾಜಕೀಯ ಕಾವೇರಲಿರುವ ಈ ಹತ್ತು ದಿನಗಳು ರಾಜ್ಯಕ್ಕೆ ಮಹತ್ವದ ನಿರ್ಧಾರಗಳೊಂದಿಗೆ ದೊಡ್ಡ ರಾಜಕೀಯ ಸಂದೇಶಗಳನ್ನು ನೀಡಲಿವೆ ಎಂಬ ನಿರೀಕ್ಷೆ ಮೂಡಿದೆ.

ವರದಿ : ಲಾವಣ್ಯ ಅನಿಗೋಳ

About The Author