ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿ ಶಾಸಕರೊಬ್ಬರ ವಿವಾದಾತ್ಮಕ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಅಬ್ದುರ್ ರಹೀಮ್ ಬಕ್ಷಿ, ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಬಂಗಾಳ ಮೂಲದ ವಲಸೆ ಕಾರ್ಮಿಕರ ಮೇಲೆ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಕ್ಷಿ, ಶಂಕರ್ ಘೋಷ್ ಅವರ ಹಿಂದಿನ ಹೇಳಿಕೆಗಳನ್ನು ಗುರಿಯಾಗಿಸಿದರು. ಬಂಗಾಳದ ವಲಸೆ ಕಾರ್ಮಿಕರನ್ನು ರೋಹಿಂಗ್ಯಾಗಳು ಅಥವಾ ಬಾಂಗ್ಲಾದೇಶಿಗಳು ಎಂದು ಘೋಷ್ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ, ಬಕ್ಷಿ ಕಿಡಿಕಾರಿದರು.
ಬಂಗಾಳದ ಹೊರಗೆ ಕೆಲಸ ಮಾಡುವ 30 ಲಕ್ಷ ಜನರು ಬಂಗಾಳಿಗರಲ್ಲ, ಅವರು ರೋಹಿಂಗ್ಯಾಗಳು, ಬಾಂಗ್ಲಾದೇಶಿಯರು ಎಂದು ನಾಚಿಕೆಯಿಲ್ಲದೆ ಹೇಳುತ್ತಾರೆ. ಮತ್ತೆ ಇದೇ ಮಾತು ಕೇಳಿದರೆ, ನಿಮ್ಮ ಬಾಯೊಳಗೆ ಆ್ಯಸಿಡ್ ಸುರಿದು ನಿಮ್ಮ ಧ್ವನಿಯೇ ಹೊರಬರದಂತೆ ಮಾಡುತ್ತೇನೆ, ಎಂದು ಬಕ್ಷಿ ಎಚ್ಚರಿಕೆ ನೀಡಿದರು.
ಅಷ್ಟೇ ಅಲ್ಲದೆ, ಜಿಲ್ಲೆಯಾದ್ಯಂತ ಬಿಜೆಪಿ ಧ್ವಜಗಳನ್ನು ಹರಿದು ಹಾಕಬೇಕು ಹಾಗೂ ಪಕ್ಷವನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಅವರು ಜನರನ್ನು ಪ್ರೇರೇಪಿಸಿದರು. ಈ ವಿವಾದಾತ್ಮಕ ಹೇಳಿಕೆಗಳನ್ನು ಬಿಜೆಪಿ ತಕ್ಷಣವೇ ಖಂಡಿಸಿದೆ. ಆಡಳಿತ ಪಕ್ಷವು ಬೆದರಿಕೆ ಮತ್ತು ಹಿಂಸೆಯ ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿ, ಮಾಲ್ಡಾ ಉತ್ತರದ ಬಿಜೆಪಿ ಸಂಸದ ಖಗೆನ್ ಮುರ್ಮು, ಇಂತಹ ಬೆದರಿಕೆಗಳು ರಾಜ್ಯ ಚುನಾವಣೆಗೆ ಮುನ್ನ ಟಿಎಂಸಿಯ ಹತಾಶೆಯನ್ನು ಬಿಂಬಿಸುತ್ತವೆ, ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




