ಧರ್ಮಸ್ಥಳಕ್ಕೆ ಬಿಜೆಪಿ ನಾಯಕರ ದಂಡು

ಧರ್ಮಸ್ಥಳ ನಿಗೂಢ ಸಾವುಗಳ ಕೇಸ್‌ ತನಿಖೆ ನಿಲ್ಲಿಸುವಂತೆ ಬಿಜೆಪಿ ಒತ್ತಾಯಿಸಿದೆ. ಇಷ್ಟು ದಿನ ಮೌನವಾಗಿದ್ದ ಬಿಜೆಪಿ ನಾಯಕರು, ಈಗ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹಿಂದುತ್ವದ ಆಧಾರದಲ್ಲಿ, ಹಿಂದೂ ಧಾರ್ಮಿಕ ಕೇಂದ್ರಗಳ ಜೊತೆ ನಾವಿದ್ದೇವೆ ಅನ್ನೋ ಸಂದೇಶ ರವಾನಿಸಲು ಹೊರಟಿದ್ದಾರೆ.

ಇದೇ ಆಗಸ್ಟ್‌ 17ರಂದು ಧರ್ಮಸ್ಥಳಕ್ಕೆ ತೆರಳಲು ಬಿಜೆಪಿ ನಾಯಕರ ತಂಡ ಹೊರಟಿದೆ. ದೇವರ ದರ್ಶನದ ನೆಪದಲ್ಲಿ ಬೇರೆಯದ್ದೇ ಪ್ಲಾನ್‌ ಮಾಡಿಕೊಂಡಿದ್ದಾರೆ. 2 ಹಂತದಲ್ಲಿ ಬಿಜೆಪಿ ನಾಯಕರ ತಂಡ, ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ.

ಮೊದಲ ಹಂತದಲ್ಲಿ, ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಧರ್ಮಸ್ಥಳಕ್ಕೆ ರ್ಯಾಲಿ ಹೊರಟಿದ್ದಾರೆ. ಆಗಸ್ಟ್‌ 16ರಂದು ಯಲಹಂಕದಿಂದ ಧರ್ಮಸ್ಥಳ ಚಲೋ ಕೈಗೊಳ್ಳುತ್ತಿದ್ದಾರೆ. 300ಕ್ಕೂ ಹೆಚ್ಚು ಕಾರುಗಳ ಮೂಲಕ ಬೆಂಬಲಿಗರ ಜೊತೆ ಹೊರಟಿದ್ದಾರೆ. ಎರಡನೇ ಹಂತದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶಾಸಕರು, ಪರಿಷತ್‌ ಸದಸ್ಯರು ಹೊಗುತ್ತಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಮಂಜುನಾಥೇಶ್ವರನ ಭಕ್ತರಾಗಿ ತೆರಳುತ್ತಿದ್ದೇವೆ. ಭಾರತೀಯ ಜನತಾ ಪಾರ್ಟಿಯ ನಿಲುವಿನಲ್ಲಿ ಸ್ಪಷ್ಟತೆ ಇದೆ. ಎಸ್‌ಐಟಿ ತನಿಖೆ ಶೀರ್ಘವೇ ಮುಗಿಯಬೇಕು. ಇದನ್ನು ಹೀಗೆಯೇ ಎಳೆದುಕೊಂಡು ಹೋಗೋಕೆ ಸಾಧ್ಯವಿಲ್ಲ. ಗೊಂದಲಗಳಿಗೆ ತೆರೆ ಬೀಳಬೇಕು. ಈ ತನಿಖೆ ಹಿಂದೆ ಸಮಾಜಘಾತುಕ ಶಕ್ತಿಗಳ ಕುತಂತ್ರ ನಡೀತಿದೆ ಅಂತಾ, ಜನಸಾಮಾನ್ಯರು ಮಾತಾಡುತ್ತಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿ, ಅಣ್ಣಪ್ಪನ ದರ್ಶನ ಪಡೆಯುತ್ತೇವೆ ಅಂತಾ ಬೆಂಗಳೂರಿನಲ್ಲಿ ಬಿ.ವೈ. ವಿಜಯೇಂದ್ರ ಹೇಳಿದ್ರು.

ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಹೋಗುತ್ತಾ ಇರೋದು ಸಹಜ ಭೇಟಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸದ್ಯದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿಗರು ಬೇರೆಯದ್ದೇ ಪ್ಲಾನ್‌ ಮಾಡಿದ್ದಾರೆ. ಧರ್ಮಸ್ಥಳ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು, ಹಿಂದುತ್ವದ ಬಾಣ ಬಿಡಲು ರೆಡಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕರಾವಳಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿದ್ದಾರೆ.

About The Author