ಕೇರಳದಲ್ಲಿ BJP ಮ್ಯಾಜಿಕ್: ಬಿಜೆಪಿ ಗೆಲುವಿನ ಹೀರೋ ಅತುಲ್!

ಕೇರಳದಲ್ಲಿ ಭ್ರಷ್ಟ ಕಮ್ಯೂನಿಸ್ಟ್ ಆಡಳಿತದಿಂದ ತನ್ನ ಉದ್ಯಮ ಕಳೆದುಕೊಂಡ ಯುವಕ, ಅದೇ ಪಂಚಾಯಿತಿಯಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಪ್ರೇರಣಾದಾಯಕ ಸಂಗತಿ. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸು. ಆದರೆ ಸರ್ಕಾರದ ಕಚೇರಿ ಅಡೆತಡೆ, ಅನುಮತಿ ಪ್ರಕ್ರಿಯೆಗಳ ವಿಳಂಬ ಹಾಗೂ ಭ್ರಷ್ಟಾಚಾರದಿಂದ ಹಲವರ ಕನಸುಗಳು ಆರಂಭದಲ್ಲೇ ಮೊಟಕುಗೊಳ್ಳುತ್ತವೆ.

ಇಂತಹ ಅಡೆತಡೆ ಎದುರಿಸಿದ ಕೇರಳದ ಯುವಕ ಅತುಲ್ ಕೃಷ್ಣ, ತನ್ನ ಕನಸನ್ನು ಕುಗ್ಗಿಸದೇ ಸಾಮಾಜಿಕ ಹೋರಾಟದ ಮೂಲಕ, ಇಂದು ಅದೇ ಪಂಚಾಯಿತಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಪ್ರಮುಖರಾಗಿದ್ದಾರೆ. ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಕಟ್ಟಡ ನಿರ್ಮಾಣ ಕಂಪನಿ ಆರಂಭಿಸಲು ಅತುಲ್ ಪ್ರಯತ್ನಿಸಿದರು. ಆದರೆ ಪಂಚಾಯತ್‍ನಿಂದ ಲೈಸೆನ್ಸ್, ಪರಿಸರ ಮಾಲಿನ್ಯ ಮತ್ತು ಇತರ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ನೋಟಿಸ್‌ ನೀಡಲಾಯಿತು.

ಅನುಮತಿ ಸಿಗದೆ ಕಂಪನಿಯ ಕಚೇರಿಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು. ಹೀಗಾಗಿ ಬೇರೆ ದಾರಿ ಕಾಣದೆ ಆಫೀಸ್ ಮುಚ್ಚಲಾಯಿತು. ಕನಸಿನ ಗೂಪುರ ನುಚ್ಚು ನೂರಾಯಿತು. ಪ್ರತಿ ದಿನ ಅನೇಕ ಕಚೇರಿಗಳ ಸುತ್ತೋಡಿದ ವೇಳೆ, ಪಂಚಾಯತ್ ವ್ಯವಸ್ಥೆಯ ದೋಷಗಳು, ಭ್ರಷ್ಟ ನಡೆಯುಗಳು ಅತುಲ್ ಗಮನಕ್ಕೆ ಬಂದವು.

ಪಂಚಾಯತ್‌ನ ದುರಾಡಳಿತವನ್ನು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸುವ ಕೆಲಸ ಆರಂಭಿಸಿದರು. ಕಸವನ್ನು ಅನಧಿಕೃತವಾಗಿ ತ್ಯಜಿಸುವುದು, ಆಟದ ಮೈದಾನಗಳ ದುಸ್ಥಿತಿ, ನೀರು–ಒಳಚರಂಡಿ ಸಮಸ್ಯೆಗಳು ಸೇರಿದಂತೆ ಜನರಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ವೀಡಿಯೋ ಮಾಡಿ ಸಮಾಜದ ಮುಂದೆ ತಂದುಕೊಂಡುಬಂದರು. ಜನರಿಂದ ಭಾರಿ ಬೆಂಬಲ ದೊರೆತು, ಯುವಜನತೆಯಲ್ಲಿ ಅತುಲ್ ಅವರ ಹೆಸರು ಬೇಗನೇ ಪ್ರಸಿದ್ಧಿಯಾಯಿತು.

ಈ ಜನಮನ್ನಣೆಯನ್ನು ಗುರುತಿಸಿದ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿತು. ಬಲಿಷ್ಠ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪ್ರಾಬಲ್ಯವಿದ್ದ ಪಂಚಾಯಿತಿಯಲ್ಲಿ ಅತುಲ್ ಕೃಷ್ಣ ಭರ್ಜರಿಯಾಗಿ ಗೆದ್ದರು. ಬಿಜೆಪಿ ನಾಲ್ಕು ಸ್ಥಾನ ಗೆದ್ದು, ನಂತರ ಕಾಂಗ್ರೆಸ್‌ನ ಕೆಲವರು ಬೆಂಬಲ ನೀಡಿದ ಪರಿಣಾಮ, ಹಲವು ದಶಕಗಳ ನಂತರ ಮೊದಲ ಬಾರಿಗೆ ಬಿಜೆಪಿ ಆಡಳಿತ ಸ್ಥಾಪನೆಗೊಂಡಿತು.

ಈ ಬದಲಾವಣೆಯಲ್ಲಿ ಅತುಲ್ ಅವರ ಪಾತ್ರ ನಿರ್ಣಾಯಕವಾಗಿದೆ. ಕಚೇರಿ ಮುಚ್ಚಿಸಿದ ವ್ಯಥೆಯನ್ನು ಶಕ್ತಿಯಾಗಿ ಪರಿವರ್ತಿಸಿ, ಇಂದು ಅತುಲ್ ತಮ್ಮ ಆಫೀಸ್‌ನನ್ನೇ ಸಿವಿಲ್ ಎಂಜಿನಿಯರಿಂಗ್ ತರಬೇತಿ ಕೇಂದ್ರವನ್ನಾಗಿ ಮಾಡಿರುವುದು ವಿಶೇಷ. ಸುಮಾರು 200 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author