ಬೆಳಗಾವಿ : ರಾಜ್ಯದಲ್ಲಿ ಪ್ರತಿಷ್ಠಿತ ಚುನಾವಣೆಗಳಲ್ಲೊಂದಾದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿವೆ. ಜಿಲ್ಲೆಯ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಆದ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಚುನಾವಣೆಗೆ ಇನ್ನೂ ಮೂರು ತಿಂಗಳುಗಳ ಸಮಯಾವಕಾಶ ಇದ್ದರೂ ಈಗಿನಿಂದಲೇ ಪ್ರಚಾರ ಕಾರ್ಯಗಳು ಶುರುವಾಗಿವೆ.
ಈ ಚುನಾವಣೆಯು ಜಿಲ್ಲೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಅತೀ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದಿದೆ. ಕಳೆದ 1919ರಲ್ಲಿ ಸ್ಥಾಪನೆಯಾಗಿರುವ ಈ ಬ್ಯಾಂಕ್ ಚುನಾವಣೆ ಜಿಲ್ಲೆಯಲ್ಲಿನ ರಾಜಕೀಯ ದಿಕ್ಸೂಚಿಯಾಗಿದೆ.
ಇದರಲ್ಲಿ ಬಹುತೇಕ ಪ್ರಭಾವ ಶಾಲಿ ನಾಯಕರೇ ಅಧಿಕಾರವನ್ನು ನಡೆಸುತ್ತ ಬಂದಿದ್ದಾರೆ. ಹೀಗಾಗಿ ಮತ್ತೆ ಈಗ ಪ್ರತಿಷ್ಠಿತ ಬ್ಯಾಂಕ್ಅನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ರಾಜಕೀಯ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ, ಇದರ ಮೊದಲ ಭಾಗವಾಗಿಯೇ ತಮ್ಮ ತಮ್ಮ ಬಣಗಳನ್ನು ಸೇರಿಸಿಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ.
ಇದು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿನ ಪ್ರಮುಖ ಬ್ಯಾಂಕ್ ಆಗಿದೆ. ಹೀಗಾಗಿ ಘಟಾನುಘಟಿಗಳೇ ಇದರತ್ತ ಗಮನ ಹರಿಸುತ್ತಿದ್ದಾರೆ. ಇನ್ನೂ ಈ ಚುನಾವಣೆಯು ತೀವ್ರ ಪೈಪೋಟಿಯಿಂದ ಕೂಡಿದೆ. ಇದಕ್ಕಾಗಿಯೇ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಜೊಲ್ಲೆ ತಂಡದಲ್ಲಿದ್ದಾರೆ.
ಇದನ್ನೂ ಓದಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ತಾತ್ಕಾಲಿಕ ರಿಲೀಫ್
ಈ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ನಮ್ಮ ಗುಂಪು ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದಲ್ಲಿ ಯಾರೇ ಇದ್ದರೂ, ಅವರನ್ನು ಪರಿಣಾಮಕಾರಿಯಾಗಿ ಎದುರಿಸಲು ನಾವು ತಯಾರಾಗಿದ್ದೇವೆ. ಮುಖ್ಯವಾಗಿ ನಾವು ಅಧಿಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ರೈತರ ಹಿತಾಸಕ್ತಿ ಕಾಪಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಚುನಾವಣೆ ಪಕ್ಷಾತೀತವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ರಾಜಕೀಯ ನಾಯಕರು ಪಕ್ಷಾತೀತವಾಗಿ ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ. ಈಗಾಗಲೇ ಲಿಂಗಾಯತ ನಾಯಕರು ಜಾರಕಿಹೊಳಿ ಸಹೋದರರ ವಿರುದ್ಧ ಎನ್ನುವಂತೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ ರಹಸ್ಯವಾಗಿ ಚುನಾವಣಾ ಪೂರ್ವಭಾವಿ ಸಭೆಯನ್ನೂ ನಡೆಸಿದ್ದಾರೆ. ಹೀಗಾಗಿ ಈ ಬಾರಿಯ ಡಿಸಿಸಿಎ ಬ್ಯಾಂಕ್ ಚುನಾವಣೆ ಎಲ್ಲ ರಾಜಕೀಯ ನಾಯಕರ ನಿದ್ದೆಗೆಡಿಸಿದೆ.

