Saturday, July 12, 2025

Latest Posts

ಹೈಕಮಾಂಡ್ ಸ್ಪಷ್ಟನೆ ನೀಡೋವರೆಗೂ ಈ ನಾಟಕ ನಡೆಯುತ್ತೆ : ಕೈ ಕುಟುಕಿದ ಬೊಮ್ಮಾಯಿ!

- Advertisement -

ಹಾವೇರಿ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಡಿದಾಟ ಮುಂದುವರೆಯುತ್ತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಅಧಿಕಾರ ನಡೆಸುತ್ತೇನೆ, ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡರೂ ತಾಳ್ಮೆಯ ಸಾಕಾರ ಮೂರ್ತಿಯಂತೆ ಡಿಸಿಎಂ ಡಿಕೆ ಶಿವಕುಮಾರ್ ಮೌನಕ್ಕೆ ಶರಣಾಗಿದ್ದಾರೆ.

ಕೈ ಪಾಳಯದಲ್ಲಿ ನಡೆಯುತ್ತಿರುವ ಈ ಕುರ್ಚಿ ಕದನ ನೋಡಿ ಬಿಜೆಪಿಯು ವ್ಯಂಗ್ಯವಾಡುವ ಮೂಲಕ ಕಾಂಗ್ರೆಸ್ ಕಲಹವನ್ನು ನಗೆಪಾಟಲಿ ಮಾಡುತ್ತಿದೆ. ಈ ನಡುವೆಯೇ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ಟೀಕಿಸಿದ್ದಾರೆ.

ಈ ಕುರಿತು ಹಾವೇರಿಯಲ್ಲಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಸಲ ನಾನೇ 5 ವರ್ಷ ಸಿಎಂ ಎಂದು ಹೇಳುತ್ತಿದ್ದಾರೆ. ಅವರು ಹೀಗೆ ಮಾತನಾಡಿದಾಗಲೆಲ್ಲ ಅವರೇ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಛೇಡಿಸಿದ್ದಾರೆ. ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಮಾತನಾಡಬೇಕಿರುವವರು ಸುಮ್ಮನಾಗಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟತೆ ನೀಡುವವರೆಗೂ ಈ ನಾಟಕ ಮುಂದುವರೆಯುತ್ತಲೇ ಇರುತ್ತದೆ. ಇದೇ ವೇಳೆ ಅವರು ಮುಂದುವರೆದರೂ ಅಷ್ಟೇ, ಬಿಟ್ಟರೂ ಅಷ್ಟೇ. ಆದರೆ ಆಡಳಿತ ಹದಗೆಡಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರು ಐದು ವರ್ಷ ನಾನು ಇರ್ತೀನಿ ಎಂದು ಹೇಳುತ್ತಿದ್ದರೂ, ಕೆಲವರು ಇದು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಯಾರು ಕೊನೆ ಹಾಡಬೇಕು. ಈ ಬಗ್ಗೆ ಹೈಕಮಾಂಡ್ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಹೇಳಲು ಯಾಕೆ ಮುಂದಾಗುತ್ತಿಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೇಳುವುದನ್ನು ನಂಬುವ ಪರಿಸ್ಥಿತಿಯಲ್ಲಿ ಈ ರಾಜ್ಯದ ಜನರು ಇಲ್ಲ. ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ಸ್ಪಷ್ಟನೆ ನೀಡಬೇಕು. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಪ್ರಶ್ನೆಯೇ ಬಂದಿರಲಿಲ್ಲ. ಈಗ ಪ್ರಶ್ನೆಗಳು ಎದ್ದಿರುವುದನ್ನು ನೋಡಿದಾಗ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಅನುಮಾನ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅಧಿಕಾರ ಹಿಡಿದಾಗಲೆಲ್ಲ ಈ ಪ್ರಶ್ನೆ ಮೊಳಕೆಯೊಡೆಯುತ್ತದೆ. ಆದರೂ ಹೈಕಮಾಂಡ್ ಸುಮ್ಮನಿದ್ದು, ಬರೀ ಸಿಎಂ, ಡಿಸಿಎಂ ಇಬ್ಬರೇ ಮಾತನಾಡುತ್ತಿದ್ದಾರೆ. ನಿಮ್ಮ ರಾಜಕಾರಣವನ್ನು ಆಡಳಿತದಲ್ಲಿ ಬೆರೆಸಬೇಡಿ. ಈಗಾಗಲೇ ರಾಜ್ಯದ ಅಭಿವೃದ್ದಿ ಅಧೋಗತಿಗೆ ತಲುಪಿದೆ. ಅದನ್ನು ಮತ್ತಷ್ಟು ಕೆಳಗೆ ಕೊಂಡೊಯ್ಯಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ರಾಜ್ಯ ಸರ್ಕಾರದಲ್ಲಿ ಹಣ ಹೊಂದಿಸಲು ಆಗುತ್ತಿಲ್ಲ. ಹೀಗಾಗಿ ಇಲಾಖೆಗಳ ಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಈ ಸರ್ಕಾರ ಮುಂದಾಲೋಚನೆಯೇ ಇಲ್ಲದೆ ಕೆಲಸ ಮಾಡುತ್ತಿದೆ. ಇವರ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಮಂತ್ರಿಗಳು, ಮುಖ್ಯಮಂತ್ರಿ ತಮ್ಮ ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಾ ಪ್ರಹಾರ ನಡೆಸಿದ್ದಾರೆ.

 

- Advertisement -

Latest Posts

Don't Miss