Tuesday, October 14, 2025

Latest Posts

ಬಿಜೆಪಿ ಸಂಸದ ಕೆ. ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್!

- Advertisement -

ಇದೀಗ ದಿನನಿತ್ಯ ಒಂದಲ್ಲ ಒಂದು ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯ ನಾಗರಿಕರಿಂದ ಹಿಡಿದು ರಾಜ್ಯದ ಹಿರಿಯ ರಾಜಕಾರಣಿಗಳವರೆಗೂ ತಲುಪುತ್ತಿವೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರಿಯಾ ಸೈಬರ್ ವಂಚಕರ ಬಲಿಗೆ ಬಿದ್ದಿರುವ ಘಟನೆ ಸುದ್ದಿಯಾಗಿದೆ. ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಬರೋಬ್ಬರಿ ₹14 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ.

ಚಿಕ್ಕಬಳ್ಳಾಪುರದ ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರಿಯಾ ಅವರಿಗೆ ಆಗಸ್ಟ್ 26ರಂದು ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬರುತ್ತದೆ. ಕರೆ ಮಾಡಿದವರು ತಮ್ಮನ್ನು ಮುಂಬೈ ಸೈಬರ್ ಕ್ರೈಮ್ ವಿಭಾಗದ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲಾಗಿದೆ. ಆ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿದೆ. ನೀವು ತನಿಖೆಗೆ ಸಹಕರಿಸಬೇಕು. ಇಲ್ಲವಾದರೆ ಬಂಧನಕ್ಕೆ ಒಳಗಾಗುತ್ತೀರಿ ಎಂಬ ನಾಟಕದ ಮೂಲಕ ಭಯಭೀತರನ್ನಾಗಿ ಮಾಡಿ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದಾರೆ.

ಈ ಖದೀಮರು ಡಾ. ಪ್ರಿಯಾ ಅವರ ಖಾಸಗಿ ಮಾಹಿತಿಗಳನ್ನು ಬಳಸಿಕೊಂಡು ಹಣ ವರ್ಗಾವಣೆ ಮಾಡಿಸಿ, ಒಟ್ಟು ₹14 ಲಕ್ಷ ಹಣ ದೋಚಿದ್ದಾರೆ. ಆದರೆ ಘಟನೆಯು ನಡೆಯುತ್ತಿದ್ದ ಸಮಯದಲ್ಲಿಯೇ ಡಾ. ಪ್ರಿಯಾ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ದೂರು ದಾಖಲಿಸಿದ ಕಾರಣ, ಪೋಲೀಸರು ತಕ್ಷಣ ಕ್ರಮ ಕೈಗೊಂಡು ಹಣ ವರ್ಗಾವಣೆಯಾದ ಖಾತೆಯನ್ನು ಫ್ರೀಜ್ ಮಾಡಿದರು.

ಹೆಚ್ಚುವರಿ ತನಿಖೆಯ ಬಳಿಕ, ಸೆಪ್ಟೆಂಬರ್ 3 ರಂದು ಸಂಬಂಧಪಟ್ಟ ಬ್ಯಾಂಕ್‌ಗೆ ಕೋರ್ಟ್ ಆದೇಶ ಹೊರಡಿಸಿದ ಪರಿಣಾಮ, ₹14 ಲಕ್ಷ ಸಂಪೂರ್ಣವಾಗಿ ಡಾ. ಪ್ರಿಯಾ ಅವರಿಗೆ ಮರುಪಾವತಿಸಲಾಗಿದೆ. ಈ ನಡುವೆ ಸೈಬರ್ ವಂಚಕರ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದೇ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಹಿರಿಯ IAS ಅಧಿಕಾರಿ ಮೇಜರ್ ಮಣಿವಣ್ಣನ್ ಅವರ ಹೆಸರಲ್ಲೂ ವಂಚನೆ ನಡೆದಿದೆ. ವಂಚಕರು ಅವರ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಬಳಿಕ ಫರ್ನಿಚರ್ ಮಾರಾಟದ ನಾಟಕವಾಡಿ ಅವರ ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಣ ವಸೂಲಿ ಮಾಡಿದ್ದರು. ಈ ಕುರಿತಂತೆ ಮೇಜರ್ ಮಣಿವಣ್ಣನ್ ಪೊಲೀಸರಿಗೆ ದೂರು ನೀಡಿದ್ದು, ಖಾತೆ ಡಿಆ್ಯಕ್ಟಿವೇಟ್ ಮಾಡಲು ಮನವಿ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss