ನಿರಂತರ ಮಳೆ, ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ನೆರೆಪೀಡಿತ ಪ್ರದೇಶಗಳ ಸ್ಥಿತಿಗತಿ ಪರಿಶೀಲನೆಗಾಗಿ ಬಿಜೆಪಿ ನಾಯಕರು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ಹಿರಿಯ ನಾಯಕರ ತಂಡ, ಇಂದಿನಿಂದ 2 ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದೆ.
ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರ ತಂಡ ಪರಿಶೀಲನೆ ನಡೆಸಲಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬೈಲಹೊಂಗಲ ಕ್ಷೇತ್ರದ ನೇಸರಗಿ ಗ್ರಾಮದಿಂದ ಈ ಪರಿಶೀಲನಾ ಯಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಹಿರೇಬಾಗೇವಾಡಿ, ಚಿಕ್ಕೋಡಿ ಕ್ಷೇತ್ರದ ತೇಲಸಂಗ ಕ್ರಾಸ್ ಸುತ್ತಲಿನ ಪ್ರದೇಶಗಳು, ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಜುಟಗಿ, ಖೇಡಗಿ, ರೋಡಗಿ, ಮಿರಗಿ ಹಾಗೂ ಸಿಂಧಗಿ ತಾಲೂಕಿನ ದೇವಣಗಾಂವ, ಕಡೇವಾಡ ಮತ್ತು ಕುಮಸಗಿ ಸೇರಿದಂತೆ ಅನೇಕ ನೆರೆಪೀಡಿತ ಗ್ರಾಮಗಳಿಗೆ ತಂಡ ಭೇಟಿ ನೀಡಲಿದೆ.
ಈ ಪ್ರವಾಸವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡ ವೈಮಾನಿಕ ಸಮೀಕ್ಷೆಯ ಬಳಿಕ ನಡೆಯುತ್ತಿರುವುದು ವಿಶೇಷ. ಸಿಎಂ ವೈಮಾನಿಕ ಸಮೀಕ್ಷೆಯ ನಂತರ, ನೆರೆಪೀಡಿತ ಪ್ರದೇಶಗಳ ನೈಜ ಪರಿಸ್ಥಿತಿಯನ್ನು ನೆಲಮಟ್ಟದಲ್ಲಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಬಿಜೆಪಿ ಹಿರಿಯ ನಾಯಕರು ರಾಜ್ಯಮಟ್ಟದ ಪ್ರವಾಸ ಕೈಗೊಂಡಿದ್ದಾರೆ.
ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕುರಿತು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದರ ಭಾಗವಾಗಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶೀಲನೆ ನಡೆಸಿ, ರೈತರೊಂದಿಗೆ ನೇರ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದೆ. ಇದೇ ಕ್ರಮವನ್ನು ಇದೀಗ ಉತ್ತರ ಕರ್ನಾಟಕ ಪ್ರದೇಶದಲ್ಲೂ ಮುಂದುವರಿಸಲಾಗುತ್ತಿದೆ. ನೆರೆ ಪರಿಹಾರದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕಲು ಮುಂದಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ