ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೊಡುವಂತೆ, ರಾಜ್ಯ ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಿಎಂ, ಡಿಸಿಎಂಗೆ ಆರ್‌ಸಿಬಿ ಗೆಲುವಿನಲ್ಲೂ ಪುಕ್ಕಟ್ಟೆ ಪ್ರಚಾರ ತೆಗೆದುಕೊಂಡು, ಜನಪ್ರಿಯತೆ ಹೆಚ್ಚಿಸಿಕೊಳ್ಳೋ ದುರದ್ದೇಶ ಇತ್ತು. ಈ ಹುನ್ನಾರದ ಪರಿಣಾಮ 11 ಜನ ಪ್ರಾಣ ಕಳೆದುಕೊಂಡ್ರು. ಅದೇ ರೀತಿ, ಧರ್ಮಸ್ಥಳದ ವಿಚಾರದಲ್ಲೂ ಆತುರದ ನಿರ್ಧಾರ ಕೈಗೊಂಡಿದ್ದಾರೆ. ದೂರುದಾರನ ಪೂರ್ವಾಪರ ಆಲೋಚಿಸದೇ ಎಸ್‌ಐಟಿಗೆ ಕೊಟ್ಟಿರುವ ಪರಿಣಾಮ, ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿಯಾಗಿರೋದು ಸತ್ಯ ಎಂದಿದ್ದಾರೆ.
ಯಾವ ಯಾವ ಸಂಘಟನೆಗಳು, ವ್ಯಕ್ತಿಗಳು, ದುಷ್ಟ ಶಕ್ತಿಗಳು ಇದರ ಹಿಂದೆ ಕೆಲಸ ಮಾಡ್ತಿವೆ ಅನ್ನೋ ಬಗ್ಗೆ, ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕಿದೆ. ಧರ್ಮಸ್ಥಳ ಮುಗಿದ ಬಳಿಕ ಬೇರೊಂದು ಹಿಂದೂ ದೇಗುಲಗಳ ಮೇಲೆ ಷಡ್ಯಂತ್ರ್ಯ ನಡೆಯಬಹುದು. ತಡಮಾಡದೇ ಪ್ರಕರಣವನ್ನು ಎನ್‌ಐಎಗೆ ಕೊಡಿ ಅಂತಾ ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ 1ರಂದು ಸೋಮವಾರ ಧರ್ಮಸ್ಥಳ ಚಲೋಗೆ, ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ. ಈ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಆ ದಿನವೇ ಮಧ್ಯಾಹ್ನ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ, ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ಧರ್ಮಸ್ಥಳಕ್ಕೆ ಹೊರಡುವ ಮೊದಲು, ಸ್ಥಳೀಯ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ. ಬಳಿಕ ನಗರದಲ್ಲಿ ರ್ಯಾಲಿ ಮಾಡಿ ಧರ್ಮಸ್ಥಳಕ್ಕೆ ಬನ್ನಿ ಎಂದ್ರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಾಗ ಯಾವ ರೀತಿ ನಡೆದುಕೊಂಡಿತ್ತೋ?, ಸುಹಾಸ್ ಶೆಟ್ಟಿ ಹತ್ಯೆ ಪ್ರಕರದಲ್ಲಿ ಯಾವ ರೀತಿ ನಡೆದುಕೊಂಡಿತ್ತೋ?, ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಹಿಂದೂ ವಿರೋಧಿಯಂತೆ ನಡೆದುಕೊಳ್ಳುತ್ತಿದೆ. ಇದೆಲ್ಲವನ್ನು ನಾವು ಗಮನಿಸುತ್ತಿದ್ದೇವೆ. ಧರ್ಮಸ್ಥಳ ವಿಚಾರದಲ್ಲಿ ಹುಡುಗಾಟ ಆಡಬಾರದು ಅಂತಾ, ಎಸ್‌ಐಟಿ ತನಿಖೆ ಮಾಡೋದಿದ್ರೆ ಮಾಡಲಿ ಅಂತಾ ಸುಮ್ಮನಿದ್ವಿ. ಆದ್ರೆ, ಇಷ್ಟೆಲ್ಲಾ ಅಪಪ್ರಚಾರ ಆಗ್ತಿದ್ರೂ ಸರ್ಕಾರ ಸುಮ್ಮನಿದೆ. ನಿಸ್ಪಕ್ಷಪಾತ ತನಿಖೆ ಎನ್‌ಐಎಯಿಂದ ಮಾತ್ರ ಸಾಧ್ಯ. ಹೀಗಾಗಿ ಎನ್‌ಐಎ ತನಿಖೆಗೆ ಆಗ್ರಹಿಸುತ್ತೇವೆ ಅಂತಾ, ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ವಿಜಯೇಂದ್ರ ಹೇಳಿದ್ರು.
ಇನ್ನು, ಬಿಜೆಪಿಗರ ಆಗ್ರಹಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ ಅಂತಾ ಹೇಳಿದ್ದಾರೆ. ತನಿಖೆಗೆ ಏನು ಅವಶ್ಯಕತೆ ಇದೆಯೋ ಅದನ್ನು ಪೊಲೀಸರು ಮಾಡುತ್ತಾರೆ. ಮಂಪರು ಪರೀಕ್ಷೆ ಬೇಕೋ ಬೇಡವೋ ಎಂಬುದನ್ನ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ.
ಧರ್ಮಸ್ಥಳಕ್ಕೆ ಅವರೆಲ್ಲಾ ಮಂಜುನಾಥನ ದರ್ಶನ ಮಾಡಲು ಹೋಗುತ್ತಿರಬೇಕು, ಹೋಗಲಿ ಬಿಡಿ. ಮಂಜುನಾಥನ ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯನಾ? ಪ್ರಕರಣವನ್ನು ಯಾರು ರಾಜಕೀಯ ಮಾಡಬೇಡಿ ಅಂತಾ ಪರಮೇಶ್ವರ್ ಹೇಳಿದ್ರು.