Manglore:
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು [praveen nettar] ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ, ಮುಖ್ಯ ಆರೋಪಿಗಳ ಬಂಧನವಾಗಬೇಕಿದೆ ಎಂದು ಮಂಗಳೂರಿನಲ್ಲಿ ಎಡಿಜಿಪಿ ಆಲೋಕ್ ಕುಮಾರ್ [ADGP ALOK KUMAR] ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಎನ್ಐಎ [NIA]ಅಧಿಕಾರಿಗಳ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ಮಾಡುತ್ತೇವೆ. ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಎಂದು ತಿಳಿಸಿದರು.
ಇಂದು ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಐಜಿಪಿ ದೇವಜ್ಯೋತಿ ರೇ, ಎಸ್ಪಿ ಹೃಷಿಕೇಶ್ ಸೋನಾವಣೆ, ಡಿವೈಎಸ್ಪಿ ಗಾನಾ ಕುಮಾರಿ ಇದ್ದರು. ಈ ವೇಳೆ ಅಲೋಕ್ ಕುಮಾರ್ ಬಂಧಿತ ಆರೋಪಿಗಳ ಬಗ್ಗೆ ತನಿಖಾಧಿಕಾರಿ ಗಾನಾ ಕುಮಾರಿಯಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಎನ್ಐಎ ಅಧಿಕಾರಿಗಳ ಜೊತೆ ಕರ್ನಾಟಕ ತಂಡ ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡಲಿದೆ. ಅವರ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ, ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆವಾಗವಾಗ ಅವರ ಸ್ಥಳಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಆರೋಪಿಗಳಿಗೆ ಪಿಎಫ್ಐ ಲಿಂಕ್ ಇದೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡೋದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ, ಸುಮ್ಮನೆ ಏನನ್ನೂ ಹೇಳೋದಿಲ್ಲ. ಕೆಲವು ಆರೋಪಿಗಳಿಗೆ ಪಿಎಫ್ಐ ಲಿಂಕ್ ಇದೆ ಎಂದು ಹೇಳಿದರು.
ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್ಐ ಲಿಂಕ್ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ.ಈ ಸಂಧರ್ಭದಲ್ಲಿ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ. ಅವರಿಗೆ ನಿರ್ದೇಶನ ನೀಡಿರೋದು ಯಾರು ಎಂಬುವುದರ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ಐಎ ಅಧಿಕಾರಿಗಳು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಎಸ್ಪಿಗಳ ಜೊತೆ ಸಭೆ ಮಾಡುತ್ತೇವೆ ಎಂದು ಹೇಳಿದರು.