Wednesday, July 30, 2025

Latest Posts

ಯತ್ನಾಳ್ ದೂರ ದೂರ ವಿಜಯೇಂದ್ರಗೆ ಟಕ್ಕರ್ : ಏನಿದು ಬಜೆಪಿ ಭಿನ್ನರ ಮಹದೇವಪುರ ಮಾಸ್ಟರ್ ಪ್ಲ್ಯಾನ್?

- Advertisement -

ಬೆಂಗಳೂರು : ತಮ್ಮ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಬಿಜೆಪಿ ರೆಬಲ್ ನಾಯಕರು ಸರಣಿ ಸಭೆಗಳನ್ನು ನಡೆಸಿ ಪಕ್ಷದ ಹೈಕಮಾಂಡ್ ನಾಯಕರಿಗೆ ತಮ್ಮ ಸಂದೇಶ ರವಾನಿಸುತ್ತಿದ್ದಾರೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವದ ವಿರುದ್ಧ ನಾವೆಲ್ಲ ಒಟ್ಟಾಗಿದ್ದೇವೆ ಎಂಬ ಖಡಕ್ ಮೆಸೇಜ್ ನೀಡುತ್ತಿದ್ದಾರೆ. ಕಳೆದ ವಾರದಲ್ಲಷ್ಟೇ ಬೆಳಗಾವಿ ಜಿಲ್ಲೆಯ ಗೋಕಾಕ್​​ನಲ್ಲಿ ಮಹಾಲಕ್ಷ್ಮಿ ಜಾತ್ರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಭಿನ್ನರು, ಬಳಿಕ ದಾವಣಗೆರೆಯಲ್ಲಿ ಮಾಜಿ ಕೇಂದ್ರ ಸಚಿವ ಜೆ.ಎಂ. ಸಿದ್ದೇಶ್ವರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಒಂದಾಗಿ ಸೇರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಗುಟುರು ಹಾಕಿದ್ದರು.

ಆದರೆ ಇಷ್ಟಕ್ಕೆ ನಿಲ್ಲದ ಇವರ ಈ ಒಗ್ಗಟ್ಟಿನ ಮಂತ್ರವನ್ನು ಬೆಂಗಳೂರಿನಲ್ಲೂ ಜಪಿಸಿದ್ದಾರೆ. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ವಿರುದ್ಧ ಜನಜಾಗೃತಿ ಅಭಿಯಾನದ ಹೆಸರಿನಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ನಡೆದ ಸಮಾವೇಶದಲ್ಲೂ ಎಲ್ಲ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.

ಇನ್ನೂ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೂರು ಸ್ಥಳಗಳಲ್ಲಿ ಒಂದೆಡೆ ಸೇರಿದರೂ ಕೂಡ ಯತ್ನಾಳ್ ಅವರಿಂದ ಈ ಎಲ್ಲ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಹರಿಹರ ಶಾಸಕ ಬಿ.ಪಿ. ಹರೀಶ್, ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪ್ರತಾಪ್ ಸಿಂಹ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ರೆಬಲ್ ನಾಯಕರು ಭಾಗಿಯಾಗಿದ್ದರು. ಈ ಮೂಲಕ ಯತ್ನಾಳ್ ಬಿಟ್ಟು ನಾವು ದೂರವಾಗಿದ್ದೇವೆ ಎಂಬ ಸಂದೇಶ ಕೇಸರಿ ಹೈಕಮಾಂಡ್​​​ಗೆ ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಅಲ್ಲದೆ ಈ ಜನಜಾಗೃತಿ ಸಮಾವೇಶದಲ್ಲಿ ಭಿನ್ನರನ್ನು ಹೊರತುಪಡಿಸಿದರ ಬೇರಾವ ಬಿಜೆಪಿ ನಾಯಕರು ಭಾಗಿಯಾಗಿಲ್ಲ. ಹೇಗೆ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹೊಗೆಯಾಡುತ್ತಿದೆ ಎನ್ನುವುದು ಇದರಿಂದಲೇ ಸ್ಪಷ್ಟವಾಗಿ ಕಂಡು ಬರುತ್ತದೆ. ಇನ್ನೂ ಒಂದು ದೇಶದ ಅತ್ಯಂತ ದೊಡ್ಡ ಪಕ್ಷಕ್ಕೆ ತನ್ನ ಒಂದು ರಾಜ್ಯದ ಅಧ್ಯಕ್ಷರ ನೇಮಕಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಪಕ್ಷದಲ್ಲಿನ ಭಿನ್ನಮತವನ್ನು ಶಮನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಮುಂದಾಗಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಅದು ವರ್ಕೌಟ್ ಆಗುತ್ತಿಲ್ಲ.

ಇನ್ನೂ ಗಮನಾರ್ಹವಾದ ಸಂಗತಿಯೆಂದರೆ ಪಕ್ಷದ ಬ್ಯಾನರ್​ ಅಡಿಯಲ್ಲಿಯೇ ಸಮಾವೇಶ ನಡೆದರೂ ಕೂಡ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅವರ ಬಣದ ಯಾವೊಬ್ಬ ನಾಯಕರ ಭಾವಚಿತ್ರಗಳು ಆ ಬ್ಯಾನರ್​​​ನಲ್ಲಿ ಆಳವಡಿಸಿರಲಿಲ್ಲ. ಕೇವಲ ಭಿನ್ನಮತೀಯರ ಭಾವಚಿತ್ರ ಹಾಕಿರುವುದನ್ನು ಗಮನಿಸಿದಾಗ ಪಕ್ಷದಲ್ಲಿನ ಒಳ ಬೇಗುದಿಯು ಎಷ್ಟರ ಮಟ್ಟಿಗೆ ಇದೆ ಎನ್ನುವುದು ಕಂಡುಬರುತ್ತದೆ.

ಅಲ್ಲದೆ ಬಿಜೆಪಿಯಲ್ಲಿ ಭಿನ್ನರಾಗಿಯೇ ಭಿನ್ನ ಭಿನ್ನ ಹೋರಾಟಗಳನ್ನು ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿರುವ ರೆಬಲ್ ನಾಯಕರು ಈ ಹಿಂದೆ ತಮ್ಮದೇ ಆದ ರೀತಿಯಲ್ಲಿ ವಕ್ಫ್ ಆಸ್ತಿಯ ವಿರುದ್ಧ ಅಭಿಯಾನಕ್ಕೆ ಮುನ್ನುಡಿ ಬರೆದಿತ್ತು. ಬಳಿಕ ರಾಜ್ಯದಲ್ಲಿನ ವಾಲ್ಮೀಕಿ ನಿಗಮದ ಆಕ್ರಮ ಹಣ ವರ್ಗಾವಣೆಯ ಪ್ರಕರಣದ ವಿರುದ್ಧ ಬೀದಿಗಿಳಿದಿತ್ತು. ಇದೀಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ಮಾಡುವ ಮೂಲಕ ಹೈಕಮಾಂಡ್ ನಾಯಕರನ್ನು ಒಲಿಸಿಕೊಳ್ಳಲು ಭಿನ್ನರ ಬಣ ಪ್ಲ್ಯಾನ್ ರೂಪಿಸಿದೆ. ಅಲ್ಲದೆ ಹೋರಾಟ ಹಾಗೂ ಪಕ್ಷದ ವಿಚಾರದಲ್ಲಿ ವಿಜಯೇಂದ್ರ ಅವರಿಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ರೆಬಲ್ ನಾಯಕರು ಮುಂದಾಗಿದ್ದಾರೆ.

- Advertisement -

Latest Posts

Don't Miss