ಬಿಜೆಪಿ 150 ಶಾಸಕ ಸ್ಥಾನಗಳನ್ನು ಗೆದ್ದು ಮತ್ತೆ ಆಡಳಿತ ನಡೆಸಲಿದೆ – ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಆರು ದಶಕಗಳ ಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ರೈತರ ಬೆನ್ನೆಲುಬಾಗಿ ನಿಂತಿಲ್ಲ. ರೈತರ ಬೆನ್ನೆಲುಬನ್ನು ಗಟ್ಟಿ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ತುಮಕೂರಿನಲ್ಲಿ ಇಂದು ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯಿತು. ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ ಪ್ರಗತಿಪರ ರೈತರಾದ ತುಮಕೂರು ತಾಲ್ಲೂಕಿನ ಮಸಣಾಪುರದ ಜಯಣ್ಣನವರನ್ನು ಅಭಿನಂದಿಸಿ ಉದ್ಘಾಟನೆ ಮಾಡಿ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿದ ಅವರು, ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರತಿವರ್ಷ 6 ಸಾವಿರ ರೂಪಾಯಿಯನ್ನು ಹಾಕುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಫಸಲ್ ವಿಮಾ ಯೋಜನೆ ಮೂಲಕ ಕೃಷಿ ಭದ್ರತೆಯನ್ನೂ ಮೋದಿಯವರ ಸರಕಾರ ಒದಗಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಡಬಲ್ ಎಂಜಿನ್ ಸರಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ರೈತಪರವಾಗಿ ಹೋರಾಟ ಮಾಡುತ್ತ ಬಂದಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಮೊದಲ ಕೃಷಿ ಬಜೆಟ್ ಮಂಡಿಸಲಾಯಿತು. ಮೊದಲ ಬಾರಿಗೆ ಅವರು ಬೆಂಬಲ ಬೆಲೆ ಘೋಷಿಸಿದರು. ಅಲ್ಲದೆ ಸಾಲಮನ್ನಾ ಮಾಡಿದ್ದರು ಎಂದು ವಿವರಿಸಿದರು.

ಬಸವರಾಜ ಬೊಮ್ಮಾಯಿ ಅವರ ಸರಕಾರವು ದೇಶದಲ್ಲೇ ಮೊದಲ ಬಾರಿಗೆ ರೈತ ವಿದ್ಯಾನಿಧಿಯನ್ನು ಪ್ರಕಟಿಸಿ ಬೆಂಬಲಿಸಿದ್ದಾರೆ. ಕ್ಷೀರ ಅಭಿವೃದ್ಧಿ ಬ್ಯಾಂಕನ್ನೂ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗಿದೆ ಎಂದು ಶ್ಲಾಘಿಸಿದರು.

ಕೃಷಿಕರ ಪರ ಅನುದಾನವನ್ನು ನರೇಂದ್ರ ಮೋದಿಯವರು ಹಲವು ಪಟ್ಟುಗಳಷ್ಟು ಹೆಚ್ಚಿಸಿದ್ದಾರೆ. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಮೋದಿಯವರ ಸರಕಾರ ರಚಿಸಿದೆ ಎಂದರಲ್ಲದೆ, ಕಾಂಗ್ರೆಸ್‍ಗೆ ರೈತರ ಶಾಪ ತಟ್ಟಿದೆ. ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ದಾಗ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂದು ವಿವರಿಸಿದರು.

ಸಿದ್ರಾಮಣ್ಣನ ಸರಕಾರದ ಅವಧಿಯಲ್ಲಿ ಪೂಜನೀಯ ಸ್ಥಾನವುಳ್ಳ ಗೋವುಗಳ ಅತಿ ಹೆಚ್ಚು ಹತ್ಯೆ ನಡೆಯಿತು. ಗೋಹಂತಕರಿಗೆ ಕಾಂಗ್ರೆಸ್ ಸರಕಾರ ರಕ್ಷಣೆ ನೀಡಿತು. ಅಲ್ಪಸಂಖ್ಯಾತ ಓಟ್‍ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಯೋಚನೆ ಮಾಡಿದರು. ರೈತರ ಜೀವನಮಟ್ಟ ಸುಧಾರಿಸಲು ಮುಂದಾಗಲಿಲ್ಲ ಎಂದು ಟೀಕಿಸಿದರು.

ರೈತರ ಬದುಕು ಹಸನು ಮಾಡುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ- ರಾಜ್ಯ ಸರಕಾರಗಳು ಮಾಡುತ್ತಿವೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ನೆಹರೂವಿನಿಂದ ಆರಂಭಿಸಿ ಮನಮೋಹನ್ ಸಿಂಗ್ ನಡುವಿನ ಅವಧಿಯಲ್ಲಿ 4 ಲಕ್ಷ ಕೋಟಿಯ ಹಗರಣಗಳು ನಡೆದಿವೆ ಎಂದು ತಿಳಿಸಿದರು.

ಸಂಕಷ್ಟಗಳು ಬಂದಾಗ ದೇಶ ರಕ್ಷಿಸಿದ ಸಂಘಟನೆ ಆರೆಸ್ಸೆಸ್ ಎಂದ ಅವರು, ಆರೆಸ್ಸೆಸ್‍ನ ಹೆಸರು ತೆಗೆಯುವ ನೈತಿಕತೆ ಸಿದ್ರಾಮಣ್ಣನಿಗೆ ಇಲ್ಲ. ಸಮಾಜವಾದದ ಹೆಸರಿನಲ್ಲಿ ಮಜಾವಾದ ಮಾಡಿದವರು ನೀವು ಎಂದು ಟೀಕಿಸಿದರು. ಕಾಂಗ್ರೆಸ್‍ನ ಮುಖಂಡರಾದ ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ವರೆಗೆ ನಾಯಕರು ಜಾಮೀನಿನಡಿ ಹೊರಗಡೆ ಇದ್ದಾರೆ ಎಂದರು.

ಅರ್ಕಾವತಿ ಹಗರಣ ಸೇರಿದಂತೆ ಕೋಟಿ ಕೋಟಿ ಹಗರಣಗಳಲ್ಲಿ ಸಿದ್ರಾಮಣ್ಣ ಭಾಗಿಯಾಗಿದ್ದಾರೆ. ಹಾಸಿಗೆ, ದಿಂಬು ಸೇರಿದಂತೆ ಹತ್ತಾರು ಹಗರಣಗಳಲ್ಲಿ ಸಿದ್ರಾಮಣ್ಣ ಭಾಗವಹಿಸಿದ್ದಾರೆ. ನಿಮಗೆ ಆರೆಸ್ಸೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಆರೆಸ್ಸೆಸ್ ರಾಜಕೀಯ ಮಾಡುವುದಿಲ್ಲ. ಅದು ರಾಷ್ಟ್ರ ಚಿಂತನೆ ಕಲಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ನಾನೊಬ್ಬ ಆರೆಸ್ಸೆಸ್ ಕಾರ್ಯಕರ್ತ ಎನ್ನಲು ನನಗೆ ಹೆಮ್ಮೆ ಇದೆ ಎಂದರು.

ಸಿದ್ರಾಮಣ್ಣ ನಿಮ್ಮ ಹೆಸರು ಬದಲಿಸಿ. ರಾಮನ ಹೆಸರಿಗೆ ಅವಮಾನ ಮಾಡಬೇಡಿ ಎಂದು ಒತ್ತಾಯಿಸಿದರಲ್ಲದೆ, ನಿಮ್ಮ ಮನಸು, ಬುದ್ಧಿ ಹಾಗೂ ಚಿಂತನೆ ರಾವಣನದ್ದು ಎಂದು ಟೀಕಿಸಿದರು. ಒಡೆದು ಆಳುವ ನೀತಿ ಜಾರಿಗೊಳಿಸಿದ ಸಿದ್ರಾಮಣ್ಣನಿಗೆ ರೈತರ ಶಾಪ ತಟ್ಟುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನೂ ಮೋರ್ಚಾ ಮುಂದುವರಿದು ರೈತನ ಬೆಂಗಾವಲಾಗಿದೆ. ಪ್ರಯೋಗಶೀಲತೆಯ ಮೂಲಕ ರೈತ ಮೋರ್ಚಾವನ್ನು ವಿಸ್ತಿರಿಸುವ ಕೆಲಸವನ್ನು ಈರಣ್ಣ ಕಡಾಡಿ ಅವರ ನೇತೃತ್ವದ ತಂಡವು ಮಾಡಿದೆ. ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ಮೋರ್ಚಾ ಬೆಳೆಯುತ್ತಿದೆ. ರೈತ ಮೋರ್ಚಾವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕøತಿ ಎರಡೂ ನಮ್ಮ ದೇಶದಲ್ಲಿ ಪೂಜನೀಯವಾಗಿದೆ. ಋಷಿ ಮತ್ತು ಕೃಷಿಕರು ತ್ಯಾಗಜೀವಿಗಳು. ಕೃಷಿ ಸಂಸ್ಕøತಿ ಶ್ರೇಷ್ಠವಾದುದು ಎಂದರು. ರೈತಪರವಾಗಿರುವ ನಮ್ಮ ಸರಕಾರಗಳ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಿ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ಕೇಂದ್ರದ ಕೃಷಿ ಕಾಯಿದೆಗಳ ಕುರಿತು ಜನರಿಗೆ ಅರಿವು ನೀಡಲು ಎರಡು ಬಾರಿ ಪ್ರವಾಸ ಮಾಡಲಾಗಿದೆ. ಮೂರನೇ ಪ್ರವಾಸದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಕುರಿತು ಮಾಹಿತಿ ನೀಡಲಾಗಿದೆ. 10ಕ್ಕೂ ಹೆಚ್ಚು ಜಿಲ್ಲೆಗಳ ನಾಲ್ಕನೇ ಸುತ್ತಿನ ಪ್ರವಾಸ ಮುಗಿದಿದೆ ಎಂದರು.

ಸಿರಿಧಾನ್ಯಗಳ ಬೆಳೆ, ಮೌಲ್ಯವರ್ಧನೆ, ಸಬ್ಸಿಡಿ ಕುರಿತು ತಜ್ಞರಿಂದ ಮಾಹಿತಿ ಕೊಡಿಸಲಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ಕೊಟ್ಟು ವಿಜ್ಞಾನಿಗಳ ಜೊತೆ ಚರ್ಚೆ ಮಾಡಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಗಳಿಗೂ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೃಷಿಕರು, ವ್ಯವಸಾಯಗಾರರಿಗಾಗಿ ಮೋರ್ಚಾ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಕೃಷಿಕರಿಗೆ ಸರಕಾರಗಳ ಯೋಜನೆಗಳನ್ನು ತಲುಪಿಸಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು. ರೈತರ ಮಕ್ಕಳು ಕೃಷಿ ತಂತ್ರಜ್ಞಾನ ಬಳಸಿ ರೈತರಾಗುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹಗಳನ್ನು ಸರಕಾರಗಳು ನೀಡುತ್ತಿದ್ದು ಅದರ ಸದ್ಬಳಕೆ ಆಗಬೇಕು ಎಂದು ಮನವಿ ಮಾಡಿದರು.

About The Author