10 ವರ್ಷ ಬಳಿಕ BJP ದಿಗ್ವಿಜಯ – ಕಾಂಗ್ರೆಸ್ ಗೆ ಭಾರೀ ಮುಖಭಂಗ

ಕೇರಳ ರಾಜಧಾನಿ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಬಿಜೆಪಿ, ಇದೀಗ ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ವಿಜಯದ ನಗೆ ಬೀರಿದೆ. 10 ವರ್ಷಗಳ ಬಳಿಕ ನಡೆದ ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಸಾಧನೆ ಮಾಡಿದೆ.

288 ನಗರ ಪರಿಷತ್ತುಗಳು ಮತ್ತು ನಗರ ಪಂಚಾಯಿತಿಗಳ ಪೈಕಿ ಮಹಾಯುತಿ ಒಟ್ಟು 207 ಸಂಸ್ಥೆಗಳಲ್ಲಿ ಗೆಲುವು ದಾಖಲಿಸಿದೆ. ಇವುಗಳಲ್ಲಿ ಬಿಜೆಪಿ 117, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 53 ಹಾಗೂ ಅಜಿತ್ ಪವಾರ್ ಅವರ ಎನ್‌ಸಿಪಿ 37 ಸಂಸ್ಥೆಗಳಲ್ಲಿ ಜಯ ಸಾಧಿಸಿವೆ.ಇತ್ತ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಕೇವಲ 44 ಸಂಸ್ಥೆಗಳಿಗೆ ಸೀಮಿತವಾಗಿದೆ. ಮಿತ್ರಪಕ್ಷ ಕಾಂಗ್ರೆಸ್ 28, ಶರದ್ ಪವಾರ್ ಅವರ ಎನ್‌ಸಿಪಿ 7 ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ 9 ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿವೆ. ಇತರೆ ಪಕ್ಷಗಳು ಹಾಗೂ ಪಕ್ಷೇತರರು ಒಟ್ಟು 37 ಸಂಸ್ಥೆಗಳಲ್ಲಿ ಜಯ ಗಳಿಸಿದ್ದಾರೆ.

ಈ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, “ಅಭಿವೃದ್ಧಿಯ ಪಥದಲ್ಲಿ ಮಹಾರಾಷ್ಟ್ರ ದೃಢವಾಗಿ ಮುನ್ನಡೆಯುತ್ತಿದೆ. ಮಹಾಯುತಿಗೆ ಆಶೀರ್ವಾದ ಮಾಡಿದ ಮಹಾರಾಷ್ಟ್ರದ ಜನತೆಗೆ ನಾನು ಕೃತಜ್ಞನಾಗಿದ್ದೇನೆ. ಜನಕೇಂದ್ರಿತ ಅಭಿವೃದ್ಧಿ ಮತ್ತು ಮಹಾಯುತಿಯ ದೂರದೃಷ್ಟಿಯ ಮೇಲೆ ಜನರು ಇಟ್ಟಿರುವ ನಂಬಿಕೆಯೇ ಈ ಗೆಲುವು” ಎಂದು ಹೇಳಿದ್ದಾರೆ.

ಇನ್ನು ಅರುಣಾಚಲ ಪ್ರದೇಶದಲ್ಲೂ ಬಿಜೆಪಿಗೆ ಭರ್ಜರಿ ಜಯ ಲಭಿಸಿದೆ. ಅಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 245 ಜಿಲ್ಲಾ ಪರಿಷತ್ ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ 170 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ 59 ಸ್ಥಾನಗಳು ಅವಿರೋಧವಾಗಿ ಲಭಿಸಿವೆ. ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಜಯ ಗಳಿಸಿದೆ.ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದ್ದು, 8,208 ಸ್ಥಾನಗಳ ಪೈಕಿ 6,085 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಇವುಗಳಲ್ಲಿ 5,211 ಸ್ಥಾನಗಳು ಅವಿರೋಧವಾಗಿವೆ. ಕಾಂಗ್ರೆಸ್ 216 ಸ್ಥಾನಗಳನ್ನು ಗೆದ್ದಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author