ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆಯಾಗಿದೆ. 31 ವರ್ಷದ ವೆಂಕಟೇಶ್ ಅವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದಿರುವ ಘಟನೆ ಶುಕ್ರವಾರ ಸಂಭವಿಸಿದೆ. ಈ ಘಟನೆಯಿಂದ ಜಿಲ್ಲೆಯಾದ್ಯಂತ ಆತಂಕ ಮನೆಮಾಡಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವೆಂಕಟೇಶ್ ದೇವಿಕ್ಯಾಂಪ್‌ನಿಂದ ಗಂಗಾವತಿಗೆ ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಟಾಟಾ ಇಂಡಿಕಾ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಗಂಗಾವತಿಯ ಲೀಲಾವತಿ ಎಲುಬು-ಕೀಲು ಆಸ್ಪತ್ರೆ ಎದುರು ಬೈಕ್ ಗೆ ಗುದ್ದಿ ಅಡ್ಡಗಟ್ಟಿ ಲಾಂಗ್ ಮಚ್ಚುಗಳಿಂದ ಕೊಚ್ಚಿ ಕೊಲೆ ಸ್ಥಳದಲ್ಲೇ ಅವರನ್ನು ಬರ್ಬರವಾಗಿ ಕೊಂದು ಹಾಕಿದ್ದಾರೆ.
ಘಟನೆ ಸ್ಥಳಕ್ಕೆ ತಕ್ಷಣವೇ DySP ಸಿದ್ದನಗೌಡ ಪಾಟೀಲ ಹಾಗೂ ಗಂಗಾವತಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಯ ಬಳಿಕ ಕಾರ್ ಟೈರ್ ಬ್ಲಾಸ್ಟ್ ಹಿನ್ನೆಲೆ ಆರೋಪಿಗಳು ಕಾರ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅವರು ಬಳಸಿದ ಟಾಟಾ ಇಂಡಿಕಾ ಕಾರು ಗಂಗಾವತಿಯ HRS ಕಾಲೋನಿಯಲ್ಲಿ ಪತ್ತೆಯಾಗಿದೆ. ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳೇ ದ್ವೇಷವೇ ಈ ಕೊಲೆಗೆ ಕಾರಣವಾಯ್ತು ಅನ್ನೋ ಬಗ್ಗೆ ನೋಡಿದ್ರೆ
ಪ್ರಕರಣ ಸಂಬಂಧ ಪ್ರಾಥಮಿಕ ಮಾಹಿತಿಯ ಪ್ರಕಾರ ವೆಂಕಟೇಶ್ ಮತ್ತು ರವಿ ಎಂಬ ವ್ಯಕ್ತಿ ನಡುವೆ ಹಳೆಯ ವೈಷಮ್ಯ ಹಾಗು ಇಸ್ಪೀಟು ವಿಚಾರವಾಗಿ ಈ ದಾಳಿ ಹಿಂದಿನ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ರಾಜಕೀಯ ನಾಯಕತ್ವ ಹಾಗೂ ಏರಿಯಾ ಕಂಟ್ರೋಲ್ ವಿಚಾರದಲ್ಲಿ ಈ ಇಬ್ಬರ ನಡುವೆ ಕಳೆದ 7–8 ವರ್ಷಗಳಿಂದ ದ್ವೇಷ ಇತ್ತು ಎಂಬ ಆರೋಪ ಕೇಳಿಬಂದಿದೆ.
ವೆಂಕಟೇಶ್‌ನ ಸ್ನೇಹಿತರು ಈ ಕೊಲೆಗೆ ರವಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳದ ಸಾಕ್ಷ್ಯಾಧಾರಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ವರದಿ : ಲಾವಣ್ಯ ಅನಿಗೋಳ