ಪರಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಯುವ ಮುಖಂಡ ಈಗ ಸಂಕಷ್ಟದಲ್ಲಿ!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಖಂಡಿಸಿ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡಿದ್ದರು.

ಈ ವೇಳೆ ಅವರು ಗೃಹ ಸಚಿವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಂತೋಷ್ ಕೊಟ್ಯಾನ್ ಅವರನ್ನು ಬಂಧಿಸಿದರು. ನಂತರ ಅವರನ್ನು ಹೌಸಿಂಗ್ ಬೋರ್ಡ್ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.

ಬಂಧನದ ವೇಳೆ ಚಿಕ್ಕಮಗಳೂರು ಮಾರ್ಕೆಟ್ ರಸ್ತೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸಂತೋಷ್ ಕೊಟ್ಯಾನ್ ಅವರನ್ನು ಪೊಲೀಸ್ ಜೀಪ್‌ಗೆ ಕರೆದೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡ ಬಂದಿದ್ದಾರೆ. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ-ತಳ್ಳಾಟ ನಡೆದಿದೆ. ನಂತರ ನಗರ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಸಂತೋಷ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.

ಸಂತೋಷ್ ಕೊಟ್ಯಾನ್ ತಮ್ಮ ಭಾಷಣದಲ್ಲಿ, ರಾಜ್ಯದಲ್ಲಿ ಏನು ನಡೆದರೂ ಗೃಹಸಚಿವರಿಗೆ ಗೊತ್ತಿಲ್ಲ, ಗೊತ್ತಿಲ್ಲ. ಇದಕ್ಕಾಗಿಯೇ ಪರಮೇಶ್ವರ್ ಮಗ ಮಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ನಗರದಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಸಂತೋಷ್ ಕೊಟ್ಯಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author