Hubli News: ಹುಬ್ಬಳ್ಳಿ: ರಾಜ್ಯದ ಜನತೆಯ ಕಲ್ಯಾಣಕ್ಕೆ 63 ಸಾವಿರ ಕೋಟಿ ನಿಧಿ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಗೆ ಬಿಜೆಪಿ ಮತ್ತು ಜೆಡಿಎಸ್ ಯತ್ನಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಹಿಂದ ವರ್ಗಗಳ ಧೀಮಂತ ನಾಯಕನ ವಿರುದ್ಧ ಬಿಜೆಪಿಯ ಸುಳ್ಳು ಆರೋಪ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಗ್ಯಾರಂಟಿ ಗಳಿಗಾಗಿ 63 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ ಹಿಂದುಳಿದ ನಾಯಕರೊಬ್ಬರು ಈ ರೀತಿ ಬೆಳೆಯುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ಗೆ ನೋಡೋಕೆ ಆಗ್ತಿಲ್ಲ. ಅವರ ಜನಪ್ರಿಯತೆಯನ್ನು ನೋಡಿ ಸಹಿಸಿಕೊಳ್ಳಲು ಆಗ್ತಾ ಇಲ್ಲ. ಆದ್ದರಿಂದ ಅವರ ಮೇಲೆ ಆರೋಪ ಮಾಡ್ತಾ ಇದ್ದಾರೆ. ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಬೇಕು ಅನ್ನೋ ಕುತಂತ್ರ ಇದೆ. ಈ ಉದ್ದೇಶ ಬಿಟ್ಟು ಬೇರೆ ಯಾವ ಉದ್ದೇಶ ಕಾಣುತಿಲ್ಲ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದಲ್ಲಿ ಹಗರಣ ನಡೆದಿರುವುದು ತಮ್ಮ ಕಾಲದಲ್ಲೇ ಅಂತ ಬಿಜೆಪಿ ಮೊದಲು ಒಪ್ಪಿಕೊಳ್ಳಲಿ. ನಂತರ ಬೇಕಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸವಾಲು ಹಾಕಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲು ಏನು ಕಾರಣ. ಒಂದು ವಾಲ್ಮೀಕಿ ಹಗರಣದ ಬಗ್ಗೆ ಆರೋಪಿಸುತ್ತಿದ್ದಾರೆ. ಈ ಹಗರಣದ ಬಗ್ಗೆ ಸರ್ಕಾರ ಎಲ್ಲಾ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಸಚಿವ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಎಸ್‌ಐಟಿ ರಚನೆ ಆಗಿದೆ. ಜಾರಿ ನಿರ್ದೇಶನಾಲಯ ತನ್ನ ಕ್ರಮ ಕೈಗೊಂಡಿದೆ. ಮತ್ತೊಂದು ಕಡೆ ಸಿಬಿಐ ತನಿಖೆ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳಬೇಕೊ ಅದನ್ನು ನ್ಯಾಯ ಸಮ್ಮತವಾಗಿ ಮಾಡಲಾಗಿದೆ. ಹಾಗಾದರೆ ಇವರು ತನಿಖೆ ನಡೆಯುತ್ತಿದ್ದಾಗಲೇ ಏಕೆ ಮಾಡ್ತಾರೆ ಎಂದು ಪ್ರಶ್ನಿಸಿದರು.
ಈ ಪ್ರಕರಣಗಳ ಬಗ್ಗೆ ವಿಧಾನ ಮಂಡಲ ಕಲಾಪದಲ್ಲಿ ಮಾತನಾಡಲು ಸುಮಾರು ಏಳು ಗಂಟೆಗೂ ಹೆಚ್ಚು ಅವಕಾಶ ನೀಡಲಾಗಿತ್ತು. ಮುಖ್ಯಮಂತ್ರಿಯವರು ಉತ್ತರ ಕೊಡಲು ಹೋದಾಗ ವಿರೋಧ ಪಕ್ಷದವರು ಸಭಾಪತಿಗಳ ಮುಂಭಾಗ ಗಲಾಟೆ ಮಾಡಿದರು. ಆಹೋರಾತ್ರಿ ಧರಣಿ ಮಾಡಿ ಭಜನೆ ಮಾಡಿದರು. ವಿರೋಧಪಕ್ಷದವರು ಹೀಗೆ ಮಾಡಿದರೆ ಸದನದ ಕಲಾಪ ಹೇಗೆ ನಡೆಯಬೇಕು ಎಂದರು.
ಇನ್ನೂ ಮೂಡಾ ವಿಷಯಕ್ಕೆ ಬಂದರೆ ಹಗರಣ ಆಗಿರುವುದು ಬಿಜೆಪಿ ಅವಧಿಯಲ್ಲಿ. ಇದನ್ನು ಲಿಖಿತವಾಗಿ ಕೊಡಿ. ನಮ್ಮ ಕಾಲದಲ್ಲಿ ನಾವು ಹಗರಣ ಮಾಡಿದ್ದೇವೆ ಅಂತ ಬಿಜೆಪಿಯವರು ಲಿಖಿತ ರೂಪದಲ್ಲಿ ಕೊಡಲಿ. ಕಾನೂನುಬಾಹಿರವಾಗಿ ನಿವೇಶನವನ್ನು ಹಂಚಿದ್ದೇವೆ. ಮುಖ್ಯಮಂತ್ರಿ ನಿಮಗೊಬ್ಬರಿಗೆ ಅಲ್ಲ. ಬೇರೆ ಸಾಕಷ್ಟು ಜನರಿಗೆ ಕಾನೂನುಬಾಹಿರವಾಗಿ ನೀಡಿದ್ದೇವೆ. ಅದಕ್ಕಾಗಿ ತನಿಖೆ ಮಾಡಬೇಕಿದೆ. ಅದಕ್ಕಾಗಿ ಪಾದಯಾತ್ರೆ ಮಾಡ್ತಾ ಇದ್ದೇವೆ ಎಂದು ಬರೆದು ಕೊಡಲಿ ಎಂದು ಹೇಳಿದರು.
ಬಿಜೆಪಿಯವರೇ ಅಧಿಕಾರದಲ್ಲಿದ್ದಾಗಲೇ ಸೈಟ್‌ಗಳನ್ನು ನೀಡಿ. ಈಗ ಅವರೇ ಪಾದಯಾತ್ರೆ ಮಾಡ್ತಾರೆ. ಇದು ಯಾವ ಧರ್ಮ. ಬಸವರಾಜ ಬೊಮ್ಮಾಯಿ ಅವರೇ ನಮ್ಮ ಕಾಲದಲ್ಲಿ ಹಗರಣ ಆಗಿದೆ ಎಂದು ಒಪ್ಪಿಕೊಳ್ಳಲಿ. ಜನಕ್ಕೆ ಮೋಸ ಮಾಡಿದ್ದೇವೆ ಅಂತ ಹೇಳಲಿ. ಇದನ್ನೆಲ್ಲ ಜನ ನೋಡ್ತಾನೆ ಇದ್ದಾರೆ ಎಂದರು.
1936 ರಿಂದ ಈವರೆಗಿನ ಎಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಡಿನೋಟಿಫಿಕೇಶನ್ ಯಾವಾಗ ಆಗಿದೆ. ಹಸ್ತಾಂತರ ಯಾರಿಗೆ, ಯಾವಾಗ ನಡೆದಿದೆ. ಯಾವ ರೀತಿ ಭೂಮಿ ಖರೀದಿ ಆಗಿದೆ ಎಂಬ ವಿವರ ನೀಡಿದ್ದಾರೆ. ಇಷ್ಟೆಲ್ಲ ಆದರೂ ಮತ್ತೆ ಯಾಕೆ ಪಾದಯಾತ್ರೆ ಮಾಡಲಾಗುತ್ತಿದೆ ಎಂಬುದನ್ನು ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಸವಾಲು ಹಾಕಿದರು.
ವಾಶಿಂಗ್ ಪೌಡರ್ ನಿರ್ಮಾ
2014 ರಿಂದ 3000 ಇಡಿ ದಾಳಿ ಆಗಿವೆ. ಇದರಲ್ಲಿ ಶೇಕಡಾ 95 ರಷ್ಟು ವಿರೋಧ ಪಕ್ಷದ ಮೇಲೆ ಆಗಿದೆ. ಇಡಿ ದಾಳಿಗೆ ಒಳಗಾದವರೆಲ್ಲ ಬಿಜೆಪಿಯಲ್ಲಿದಾರೆ.. ಅವರು ಬಿಜೆಪಿಗೆ ಹೋದಮೇಲೆ ವಾಶಿಂಗ್ ಪೌಡರ್ ನಿರ್ಮಾ ಎಂದು ವ್ಯಂಗ್ಯವಾಡಿದರು.
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನು ಸಿಕ್ಕಿದೆ
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ೫೦ ಸಾವಿರ ಕೋಟಿಯನ್ನು ಬಿಹಾರ ಮತ್ತು ಆಂಧಪ್ರದೇಶಕ್ಕೆ ನೀಡಿದ್ದಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದಲೇ ನಮಗೆ ಬರ ಪರಿಹಾರ ಸಿಕ್ತು. ಇಲ್ಲದಿದ್ದರೆ ನಮಗೆ ಇವರು ಕೊಡ್ತಾ ಇರಲಿಲ್ಲ. ಕರ್ನಾಟಕಕ್ಕೆ ಜಿಎಸ್‌ಟಿ ಪಾಲೂ ಸರಿಯಾಗಿ ಸಿಕ್ತಾ ಇಲ್ಲ. ಎಲ್ಲಾ ಉತ್ತರ ಭಾರತದ ರಾಜ್ಯಗಳಿಗೆ ಸಿಕ್ತಾ ಇದೆ ಎಂದರು.
ಹಿಂದೂತ್ವ ಮಾತಾಡೋದು, ಓಟ್ ತಗೊಳ್ಳೋದು
ಯಾವಾಗಲೂ ಹಿಂದೂತ್ವದ ಬಗ್ಗೆ ಮಾತನಾಡಿ ಓಟ್ ತಗೊಂಡು ಹೋಗೋದು. ಹಿಂದೂಗಳು ಇಂದು ರಾಜ್ಯದಲ್ಲಿ ಬಡಪಾಯಿಗಳಾಗಿ ಬಿಟ್ಟಿದ್ದಾರೆ. ಇವರ ಹಿಂದೂತ್ವದಿಂದ ಯಾರಿಗೆ ಲಾಭವಾಗಿದೆ. ಹಿಂದೂಗಳ ತಲಾದಾಯ ಕಡಿಮೆ ಆಗಿದೆ. ಶಿಕ್ಷಣಶುಲ್ಕ ಹೆಚ್ಚಿದೆ. ನಿರುದ್ಯೋಗ ಜಾಸ್ತಿ ಆಗಿದೆ. ರೈತರ ಆತ್ಮಹತ್ಯೆ ಜಾಸ್ತಿ ಆಗಿದೆ. ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಎಷ್ಟು ಅನ್ನದಾತರ ಆತ್ಮಹತ್ಯೆ ಆಗಿದೆ ಎಂಬ ಮಾಹಿತಿ ಸರ್ಕಾರದ ಬಳಿ ಇದೆಯೇ?
ಜೋಷಿ ಅವರು ಟ್ವೀಟ್ ಮಾಡಿದರೆ ಗ್ರೇಟ್ ಅಂತಾನ
ಸಂಸದ ಪ್ರಹ್ಲಾದ ಜೋಷಿ ಅವರಿಗೆ ಕರ್ನಾಟಕದ ರೈತರ ಆತ್ಮಹತ್ಯೆ ಮಾತ್ರ ಕಾಣ್ತ ಇದೆ. ಇಡೀ ಭಾರತದ್ದು ಅವರಿಗೆ ಸಂಬಂಧ ಇಲ್ಲವೇ. ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ, ಗುಜರಾತ್‌ನಲ್ಲಿ, ಉತ್ತರ ಪ್ರದೇಶದಲ್ಲಿ ಏನು ನಡಿತಾ ಇದೆ ಅಂತ ಅವರಿಗೆ ಗೊತ್ತಿದೆಯೇ? ಎಲ್ಲದಕ್ಕೂ ಟ್ವೀಟ್ ಮಾಡೋದು ಕೂತುಬಿಡೋದು. ಇಡೀ ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರ ಹೊಣೆ ಅಲ್ಲವೇ? ನರೇಂದ್ರ ಮೋದಿ ಅವರ ಕಾಲದಲ್ಲಿ ರೈತರ ಆತ್ಮಹತ್ಯೆ ಆಗಬಾರದಲ್ಲ. ಮತ್ತೆ ಯಾಕೆ ಆಯ್ತು ಎಂದು ಪ್ರಶ್ನಿಸಿದರು.