ಹಿಂದೂಗಳು ಬಿಜೆಪಿಗೆ ಮತ ಹಾಕಿದರೆ ವಂಚನೆ, ಆದರೆ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಜಾತ್ಯತೀತತೆ. ಹೀಗಂತ ಬೆಂಗಳೂರು ಸೆಂಟ್ರಲ್‌ನ ಸಂಸದ ಪಿ.ಸಿ. ಮೋಹನ್ ಗುಡುಗಿದ್ದಾರೆ. 2024ರ ಲೋಕಸಭೆ ಚುನಾವಣೆ ಬಳಿಕ ಚುನಾವಣೆ ಫಲಿತಾಂಶಗಳ ಬಗ್ಗೆ, ರಾಹುಲ್ ಗಾಂಧಿ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮತಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಾದೇವಪುರ ಸೇರಿ ಕೆಲವೊಂದು ಕ್ಷೇತ್ರಗಳಲ್ಲಿ, ಮತಗಳ್ಳತನ ನಡೆದಿದೆ ಅಂತ ಆರೋಪ ಮಾಡಿದ್ರು. ಆದ್ರೆ ಈ ಹೇಳಿಕೆಯನ್ನ ಪಿ.ಸಿ. ಮೋಹನ್ ತಳ್ಳಿಹಾಕಿದ್ದಾರೆ.
ಮಹಾದೇವಪುರ ಕ್ಷೇತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಪಿಸಿ ಮೋಹನ್ ತಿರುಗೇಟು ನೀಡಿದ್ದಾರೆ. ಇನ್ನು, 2024ರಲ್ಲಿ ಯಾರ ಸರ್ಕಾರ ಇತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದೊಂದಿಗೆ ಮತದಾರರ ಪಟ್ಟಿ ಮಾಡಿಕೊಡಲಾಗುತ್ತದೆ. ಹಾಗಿದ್ದರೆ ಅವರದ್ದೇ ತಪ್ಪು ಅಲ್ಲವೇ. ಕಾಂಗ್ರೆಸ್‌ಗೆ ಒಂದು ಸ್ಥಾನದಿಂದ, ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು ಎಂದು ಪ್ರಶ್ನಿಸಿದರು.
2024ರ ಗೆಲುವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ, ಸಾವಿರಾರು ಹಿಂದೂಗಳು ತಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ, ಮತಗಳ್ಳತನ ಆಗಿದೆ ಎಂದು ಹೇಳುವ ಮೂಲಕ, ರಾಹುಲ್ ಗಾಂಧಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ