ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ನೂತನ ಮೇಯರ್ ಆಗಿ ಬಿಜೆಪಿಯ ರಾಮಣ್ಣ ಬಡಿಗೇರ ಹಾಗೂ ಉಪಮೇಯರ್ ಆಗಿ ಕಮಲ ಪಾಳಯದ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ. ಈ ಮೂಲಕ ಪಾಲಿಕೆಯ 23 ನೇ ಅವಧಿಯ ಅಧಿಕಾರವೂ ಕೂಡ ಬಿಜೆಪಿಗೆ ಒಲಿದಿದೆ.
ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ರಾಮಣ್ಣ ಅವರಿಗೆ 47 ಮತಗಳು ಬಂದರೆ, ಕಾಂಗ್ರೆಸ್ ಇಮಾಮ ಯಲಿಗಾರ ಅವರಿಗೆ 36 ಮತಗಳು ಬಂದಿವೆ. ಮೂವರು ಕಾರ್ಪೊರೇಟರ್ಗಳು ತಟಸ್ಥರಾಗಿದ್ರೆ, ನಾಲ್ವರು ಮತದಾನಕ್ಕೆ ಗೈರಾಗಿದ್ರು. ಉಪ ಮೇಯರ್ ಹುದ್ದೆ ಸ್ಪರ್ಧಿಸಿದ್ದ ಬಿಜೆಪಿಯ ದುರ್ಗಮ್ಮ ಪರ 47 ಮತಗಳು ಚಲಾವಣೆಯಾದ್ರೆ, ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮ ಹಿರೇಮನಿ ಅವರಿಗೆ 36 ಮತಗಳು ಚಲಾವಣೆಗೊಂಡವು. ಈ ಬಾರಿಯ ಮೇಯರ್ ಸ್ಥಾನ ಹಿಂದುಳಿದ ವರ್ಗ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.
ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ಈ ಬಾರಿಯೂ ಪಾಲಿಕೆಯ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರು, ರಾಮಣ್ಣ ಬಡಿಗೇರ ಅಭಿಮಾನಿಗಳು ಪಾಲಿಕೆ ಆವರಣದ ಮುಂದೆ ಸಂಭ್ರಮಾಚರಣೆ ಮಾಡಿದ್ರು.



