ಮದುವೆ ದಿನ ಬೆಸ್ಟ್ ಫ್ರೆಂಡ್ ಕೊಟ್ಟಿದ್ದ ಬೆಳ್ಳಿಯ ಗಿಫ್ಟ್ ಮಾರಲು ಹೋದವಳಿಗೆ ಕಾದಿತ್ತು ಆಘಾತ. ಹೌದು ವಿಜ್ಞಾನ ಎಷ್ಟೇ ಮುಂದುವರೆದರೂ, ಕೆಲವು ಘಟನೆಗಳು ಜನರನ್ನು ಇನ್ನೂ ಮೂಢನಂಬಿಕೆ ಮತ್ತು ಮಾಟಮಂತ್ರಗಳತ್ತ ತಳ್ಳುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಯೆಮನ್‌ನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮಹಿಳೆಯೊಬ್ಬರು ತಮ್ಮ ಮದುವೆಯ ದಿನ ಆತ್ಮೀಯ ಗೆಳತಿಯಿಂದ ಪಡೆದಿದ್ದ ಬೆಳ್ಳಿ ಸೊಂಟದ ಪಟ್ಟಿಯನ್ನು ಮಾರಲು ಆಭರಣ ಅಂಗಡಿಗೆ ತೆರಳಿದ್ದರು. ಆದರೆ ಅಂಗಡಿಯಲ್ಲಿ ಆ ಪಟ್ಟಿಯನ್ನು ಕತ್ತರಿಸಿದ ವೇಳೆ ಅದರ ಒಳಗೆ ಪ್ಲಾಸ್ಟಿಕ್‌ನಲ್ಲಿ ದಾರದಿಂದ ಸುತ್ತಿದ್ದ ಸಣ್ಣ ವಸ್ತುವೊಂದು ಪತ್ತೆಯಾಗಿದೆ. ಇದನ್ನು ಕಂಡು ಅಂಗಡಿ ಮಾಲೀಕರೇ ಬೆಚ್ಚಿಬಿದ್ದಿದ್ದಾರೆ.
ಈ ವಸ್ತು ಮಾಟಮಂತ್ರಕ್ಕೆ ಸಂಬಂಧಿಸಿದದ್ದಾಗಿದ್ದು, ಮಹಿಳೆಗೆ ಗರ್ಭಧಾರಣೆ ಆಗದಂತೆ ತಡೆಯಲು ಬಳಸಿರಬಹುದು ಎನ್ನಲಾಗುತ್ತಿದೆ. ಮದುವೆಯಾಗಿ ಸುಮಾರು 20 ವರ್ಷ ಕಳೆದರೂ ಆಕೆ ಗರ್ಭಿಣಿಯಾಗಿರಲಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದ್ದು, ಇದೀಗ ಈ ಪ್ರಕರಣ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಬ್ಲ್ಯಾಕ್ ಮ್ಯಾಜಿಕ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದನ್ನೆಲ್ಲಾ ಮೂಢನಂಬಿಕೆ ಎಂದು ತಳ್ಳಿ ಹಾಕಿದ್ದಾರೆ.
ಇದು ಒಂದು ರೀತಿಯ ಮಾಟಮಂತ್ರ. ಮನೆಯಲ್ಲಿದ್ದರೂ ಸಾಕು ಹಾನಿಯಾಗುತ್ತದೆ, ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, “ಅವಳು ಕೊನೆಗೂ ಅದರಿಂದ ಮುಕ್ತಿ ಪಡೆದಿದ್ದಾಳೆ ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ವೈರಲ್ ಆದ ಈ ಘಟನೆ ಸ್ನೇಹ, ನಂಬಿಕೆ ಮತ್ತು ಮೂಢನಂಬಿಕೆ ಕುರಿತಂತೆ ಹೊಸ ಚರ್ಚೆಗೆ ತೆರೆ ಎಳೆದಿದೆ.
ವರದಿ : ಲಾವಣ್ಯ ಅನಿಗೋಳ




