ರಕ್ತ ಚಂದ್ರಗ್ರಹಣ, ರಾಜ್ಯದ ದೇವಾಲಯಗಳು ಬಂದ್ – ಸಾವಿರಾರು ಭಕ್ತರಿಗೆ ದರ್ಶನ ಸ್ಥಗಿತ!

ಸೆ.7 ರಂದು ರಾತ್ರಿ ರಾಹುಗ್ರಸ್ತ ರಕ್ತ ಚಂದ್ರಗ್ರಹಣ ನಡೆಯಲಿದೆ. ಇದು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ಈ ಗ್ರಹಣ ಗೋಚರವಾಗಲಿದೆ. ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ನೆರಳಿನ ಆಟಕ್ಕೆ ಭಾರತವೂ ಸಾಕ್ಷಿಯಾಗಲಿದೆ.

ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಸೂರ್ಯರ ನಡುವೆ ಭೂಮಿ ಬಂದಾಗ ನಡೆಯುವ ಈ ಘಟನೆಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ಮಿಸ್ ಮಾಡಿಕೊಂಡ್ರೆ ಇನ್ನು ಮೂರು ವರ್ಷ ಕಾಯಬೇಕಾಗುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ, ಗ್ರಹಣದ ಸಂದರ್ಭದಲ್ಲಿ ದೇವಾಲಯಗಳಲ್ಲಿ ಪೂಜೆ, ದರ್ಶನ ಹಾಗೂ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸಲಾಗುತ್ತದೆ. ಗ್ರಹಣದ ದುಷ್ಪರಿಣಾಮಗಳು ದೇವಾಲಯಗಳ ಮೇಲೆ ಬೀಳಬಾರದು ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳ ದರ್ಶನದ ಅವಧಿ ಬದಲಾಗಲಿದೆ. ರಾಜ್ಯದ ಹಲವಾರು ಪ್ರಸಿದ್ಧ ದೇವಾಲಯಗಳು ಮುಚ್ಚಲಾಗುತ್ತಿವೆ.

ಬೆಂಗಳೂರು ನಗರದಲ್ಲಿ ಮುಚ್ಚಲಾಗುವ ದೇವಾಲಯಗಳನ್ನ ನೋಡೋದಾದ್ರೆ ಗಾಳಿ ಆಂಜನೇಯ ದೇವಸ್ಥಾನ ಮಧ್ಯಾಹ್ನ 3:00 ಗಂಟೆಗೆ ಬಂದ್ ಆಗಲಿದೆ. ಬನಶಂಕರಿ ದೇವಸ್ಥಾನ ಸಂಜೆ 6:00 ಗಂಟೆಗೆ ಬಂದ್ ಆಗಲಿದೆ. ರಾಜರಾಜೇಶ್ವರಿ ದೇವಸ್ಥಾನ ರಾತ್ರಿ 8:00 ಗಂಟೆಗೆ ಬಂದ್ ಆಗಲಿದೆ. ಇಸ್ಕಾನ್ ದೇವಸ್ಥಾನ ರಾತ್ರಿ 9:00 ಗಂಟೆಗೆ ಬಂದ್ ಆಗಲಿದೆ.

ಜೊತೆ ಚಾಮುಂಡಿ ಬೆಟ್ಟ ದೇಗುಲ ರಾತ್ರಿ 9:30 ಗಂಟೆಗೆ ಬಂದ್ ಆಗಲಿದೆ. ಕುಕ್ಕೆ ಸುಬ್ರಹ್ಮಣ್ಯ ಸಂಜೆ 5:00 ಗಂಟೆಗೆ, ಧರ್ಮಸ್ಥಳ ಮಂಜುನಾಥ ದೇವಸ್ಥಾನ ಸಂಜೆ 7:00 ಗಂಟೆಗೆ, ಬೇಲೂರು ಚನ್ನಕೇಶವ ದೇವಸ್ಥಾನ ಮಧ್ಯಾಹ್ನ 3:00 ಗಂಟೆಗೆ ಬಂದ್ ಆಗಲಿದೆ.

ಗ್ರಹಣದ ಸಂದರ್ಭದಲ್ಲಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ದೇಗುಲ ಮತ್ತು ಶೃಂಗೇರಿ ಶಾರದಾ ಪೀಠ, ಬೆಳಗಾವಿಯ ಸವದತ್ತಿಯ ಯಲ್ಲಮ್ಮ ದೇವಾಲಯಗಳಲ್ಲಿ ಎಂದಿನಂತೆ ಪೂಜೆ ನಡೆಯಲಿದೆ.

ವರದಿ : ಲಾವಣ್ಯ ಅನಿಗೋಳ

About The Author