ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬತ್ತಳಿಕೆಗೆ ಇನ್ನಷ್ಟು ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಈಗಾಗಲೇ ವಿವಿಧ ಮಾದರಿಯ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳ ಜತೆಗೆ ಪಲ್ಲಕ್ಕಿ (ನಾನ್ ಎಸಿ ಸ್ಲೀಪರ್) ಹಾಗೂ ವಿದ್ಯುತ್ ಚಾಲಿತ ಬಸ್‌ಗಳು ಕೂಡ ಶೀಘ್ರದಲ್ಲೇ ರಸ್ತೆಗಿಳಿಯಲಿವೆ.
ಮುಂದಿನ ವರ್ಷದ ಮಾರ್ಚ್ ವೇಳೆಗೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಎರಡೂ ಸಂಸ್ಥೆಗಳ ಮೂಲಕ ಒಟ್ಟಾರೆ 4,560 ಹೊಸ ಬಸ್‌ಗಳು ಕಾರ್ಯಾಚರಣೆಗೆ ಬರಲಿವೆ. ಇದರಲ್ಲಿ ಡೀಸೆಲ್ ಮತ್ತು ವಿದ್ಯುತ್ ಚಾಲಿತ ಬಸ್‌ಗಳೂ ಸೇರಿವೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೆಎಸ್‌ಆರ್‌ಟಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಪಲ್ಲಕ್ಕಿ ಬಸ್‌ಗಳನ್ನು ಖರೀದಿಸಲು ಯೋಜಿಸಿದೆ. ಈ ಸಂಬಂಧ ಸಾರಿಗೆ ಸಂಸ್ಥೆ ಆರ್ಥಿಕ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆಗೆ ಈಗಾಗಲೇ ಅನುಮೋದನೆ ಲಭಿಸಿದೆ.
2026ರ ಮಾರ್ಚ್ ಒಳಗೆ ಸುಮಾರು 60 ನಾನ್ ಎಸಿ ಸ್ಲೀಪರ್ ಬಸ್‌ಗಳು ಕೆಎಸ್‌ಆರ್‌ಟಿಸಿ ಬತ್ತಳಿಕೆಗೆ ಸೇರ್ಪಡೆಯಾಗಲಿವೆ. ಜೊತೆಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಒಟ್ಟು 650 ಬಸ್‌ಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಕೇಂದ್ರ ಸರ್ಕಾರದ ಫೇಮ್–2 ಯೋಜನೆಯಡಿ, 1,221 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‌ಗಳನ್ನು ಜಿಸಿಸಿ ಮಾದರಿಯಲ್ಲಿ ಕಾರ್ಯಾಚರಣೆಗೆ ಮಂಜೂರಾತಿ ನೀಡಲಾಗಿದೆ. ಈ ಬಸ್‌ಗಳು ಕೂಡ ಶೀಘ್ರದಲ್ಲೇ ಸೇವೆಗೆ ಬರಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಿಂದ 25 ಕಿಲೋಮೀಟರ್ ವ್ಯಾಪ್ತಿವರೆಗೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿದಿನ ಸರಾಸರಿ 44 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸೇವೆಯನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ನಿಗಮಕ್ಕೆ ಅಗತ್ಯವಿರುವ 500 ಡೀಸೆಲ್ ಮಾದರಿಯ ಬಸ್‌ಗಳು ಹಾಗೂ 114 ನಗರ ಸಾರಿಗೆ ಮಾದರಿಯ ವಾಹನಗಳ ಖರೀದಿಗೆ ಸಂಬಂಧಿಸಿದ ಆಡಳಿತಾತ್ಮಕ ಅನುಮೋದನೆ ಪ್ರಸ್ತಾವನೆ ಈಗ ಪರಿಶೀಲನೆಯಲ್ಲಿದೆ.
ಈ ಸಾಲಿನಲ್ಲಿ ಈಗಾಗಲೇ 5 ವೋಲ್ವೊ ಮಲ್ಟಿ ಆಕ್ಸಲ್ ಸೀಟರ್ ಹಾಗೂ 5 ಮಲ್ಟಿ ಆಕ್ಸಲ್ ಸ್ಲೀಪರ್ ವಾಹನಗಳನ್ನು ಖರೀದಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರು ನಗರಕ್ಕೆ ಪ್ರಸ್ತುತ ಅಗತ್ಯವಿರುವಷ್ಟು ಬಸ್ ಸೇವೆ ಲಭ್ಯವಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಪಿಎಂ–ಇ–ಡ್ರೈವ್ ಯೋಜನೆಯಡಿ, 4,500 ವಿದ್ಯುತ್ ಚಾಲಿತ ಬಸ್‌ಗಳನ್ನು ಜಿಸಿಸಿ ಮಾದರಿಯಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ವ್ಯಾಪ್ತಿಯಲ್ಲಿ ಪ್ರಸ್ತುತ ಸುಮಾರು 7,000 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿದ್ದು, ನಗರಕ್ಕೆ ಒಟ್ಟು 10,000 ಬಸ್‌ಗಳ ಅಗತ್ಯವಿದೆ. ಈ ಕೊರತೆಯನ್ನು ನೀಗಿಸಲು 2026ರ ಮಾರ್ಚ್‌ನಿಂದ, ಪಿಎಂ–ಇ–ಡ್ರೈವ್ ಯೋಜನೆಯಡಿ ಕೇಂದ್ರ ಸರ್ಕಾರ ಮತ್ತಷ್ಟು ಬಸ್‌ಗಳನ್ನು ಬೆಂಗಳೂರಿನಲ್ಲಿ ರಸ್ತೆಗಿಳಿಸುವ ನಿರೀಕ್ಷೆಯಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




