ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ನಡುವೆ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ಚರ್ಯಚಕಿತಗೊಳಿಸುವ ವರದಿಯೊಂದನ್ನು ಹೊರ ಹಾಕಿದೆ. ಇದರಲ್ಲಿ ವಾಹನ ಧೂಳು, ರಸ್ತೆ ಗುಂಡಿಗಳು ಹಾಗೂ ಲೇಔಟ್‌ಗಳ ನಿರ್ಮಾಣ ಸೇರಿದಂತೆ ಅನೇಕ ಅಂಶಗಳು ಮಾಲಿನ್ಯಕ್ಕೆ ಕಾರಣವೆಂದು ತಿಳಿಸಿದೆ.
ಇತ್ತೀಚೆಗೆ ಪ್ರಕಟವಾದ ಸ್ವಚ್ಛ ಸರ್ವೇಕ್ಷಣ 2025 ರ‍್ಯಾಂಕಿಂಗ್‌ನಲ್ಲಿ ಬೆಂಗಳೂರು 28ನೇ ಸ್ಥಾನದಿಂದ 36ನೇ ಸ್ಥಾನಕ್ಕೆ ಕುಸಿದಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ವಾಹನಗಳಿಂದ ಹೊರಬರುವ ಹೊಗೆ ಮತ್ತು ಧೂಳಿನ ಕಣಗಳು ಮಾತ್ರವಲ್ಲ. ರಸ್ತೆ ಗುಂಡಿಗಳಿಂದ ಎಳುವಂತಹ ಧೂಳು ಹಾಗೂ ಮರಗಳನ್ನ ಕಡಿದು ಲೇಔಟ್‌ಗಳ ನಿರ್ಮಾಣ ಮಾಡುವ ಪ್ರಕ್ರಿಯೆಗಳು ಕೂಡ ನಗರದ ಗಾಳಿಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತಿವೆ.
ಗುಂಡಿಗಳಿಂದ ವಾಹನಗಳ ಚಾಲನೆ ವೇಳೆ ಧೂಳಿನ ಕಣಗಳು ಗಾಳಿಗೆ ಸೇರಿ, ನಗರದ ವಾತಾವರಣವನ್ನು ಇನ್ನಷ್ಟು ಕಲುಷಿತಗೊಳಿಸುತ್ತಿವೆ. ಗುಂಡಿಗಳನ್ನು ಮುಚ್ಚಲು ಸರ್ಕಾರ ಗಡುವು ನೀಡಿದೆ. ಆದರೂ ಕೂಡ ಕಾರ್ಯ ನಿರ್ವಹಣೆಯಲ್ಲಿ ವಿಳಂಬವಾಗುತ್ತಲೇ ಇದೆ ಎಂದು ಆರೋಪವಾಗಿದೆ.
ಹದಗೆಟ್ಟ ವಾಯುಮಾಲಿನ್ಯದಿಂದ ಬೆಂಗಳೂರು ನಿವಾಸಿಗಳ ಜೀವಿತಾವಧಿಯು ಸರಾಸರಿ 2 ವರ್ಷಗಳವರೆಗೆ ಕಡಿಮೆಯಾಗಿರುವ ಶಾಕಿಂಗ್ ಮಾಹಿತಿಯೂ ಹೊರಬಿದ್ದಿದೆ. ತಜ್ಞರ ಪ್ರಕಾರ, ಪ್ರತಿದಿನ ಸುಮಾರು 1 ಕೋಟಿಗೂ ಹೆಚ್ಚು ವಾಹನಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಕಾರ್ಬನ್ ಡೈಆಕ್ಸೈಡ್ ಸೇರಿದಂತೆ ಅನೇಕ ವಿಷವಾಯುಗಳು ವಾತಾವರಣಕ್ಕೆ ಸೇರುತ್ತಿವೆ.
ಇನ್ನು ದೀಪಾವಳಿ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿತದಿಂದ ವಾಯುಮಾಲಿನ್ಯ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಇದೆ ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆತಂಕ ತಂದಿದೆ. ಪರಿಸರ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಲಿನ್ಯ ನಿಯಂತ್ರಣಕ್ಕಾಗಿ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಸ್ತೆ ಗುಂಡಿಗಳ ಸರಿಪಡಿಕೆ, ಮರ ಕಡಿಯುವಿಕೆ ಪ್ರಕ್ರಿಯೆಗೆ ನಿಯಂತ್ರಣ ಮತ್ತು ಪಟಾಕಿಗಳ ನಿಷೇಧ ಅಥವಾ ನಿಯಂತ್ರಣದ ಅಗತ್ಯವಿದೆ ಎಂದು ಸೂಚಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ