17 ವರ್ಷ ಡೇಟ್ ಮಾಡಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಿರ್ದೇಶಕ.!

ಪ್ರೀತಿ ಮಾಡಿ, ಮಕ್ಕಳು ಹುಟ್ಟಿ ದಶಕಗಳ ನಂತರದಲ್ಲಿ ಮದುವೆಯಾದರೆ ಹೇಗಿರುತ್ತದೆ ಎಂದರೆ ಇದೆಲ್ಲ ಸಿನಿಮಾದಲ್ಲಿ ಮಾತ್ರ ನಡೆಯುತ್ತದೆ, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದು ಕೆಲವರು ಹೇಳಬಹುದು. ಆದರೆ ಇದನ್ನು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ನಡೆಯುತ್ತದೆ ಎಂದು ನಿರ್ದೇಶಕ ಹನ್ಸಲ್ ಮೆಹ್ತಾ ತೋರಿಸಿಕೊಟ್ಟಿದ್ದಾರೆ.

ಹನ್ಸಲ್ ಮೆಹ್ತಾ ಮತ್ತು ಸಫೀನಾ ಹುಸೇನ್ ಹದಿನೇಳು ವರ್ಷಗಳಿಂದ ಡೇಟ್ ಮಾಡುತ್ತಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಿರುತೆರೆಯಲ್ಲೂ ಕೂಡ ಸಾಕಷ್ಟು ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಗ ಇವರಿಬ್ಬರು ಕೆಲವೇ ಕೆಲವು ಜನರ ಸಾಕ್ಷಿಯಾಗಿ ಕ್ಯಾಲಿಫೋರ್ನಿಯಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

“ನಮ್ಮ ಮಕ್ಕಳು ಬೆಳೆಯೋದನ್ನು ನೋಡುತ್ತ, ನಮ್ಮ ಕನಸುಗಳ ಬೆನ್ನತ್ತಿ ಹೋಗುತ್ತ 17 ವರ್ಷಗಳು ಕಳೆದ ನಂತರದಲ್ಲಿ ನಾವು ಮದುವೆಯಾದೆವು. ಜೀವನದಲ್ಲಿ ಇದು ಕೂಡ ಯೋಜನೆಯಾಗಿರಲಿಲ್ಲ, ಹಾಗೆ ನಡೆಯಿತು. ಆದರೆ ನಮ್ಮ ಪ್ರತಿಜ್ಞೆಗಳು ಸತ್ಯವಾದವು. ಅಂತಿಮವಾಗಿ ಪ್ರೀತಿ ಎಲ್ಲಕ್ಕಿಂತ ಮೇಲುಗೈ ಸಾಧಿಸುತ್ತದೆ” ಎಂದು ಬರೆದುಕೊಂಡು ಮದುವೆಯ ಫೋಟೋವನ್ನು ಹನ್ಸಲ್ ಮೆಹ್ತಾ ಹಂಚಿಕೊಂಡಿದ್ದಾರೆ.

ಇನ್ನು ಈ ಜೋಡಿಗೆ ಅಭಿಮಾನಿಗಳು ಮತ್ತು ಸಿನಿ ಕಲಾವಿದರು ಶುಭ ಹಾರೈಸಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

About The Author