ಚೆನ್ನೈನಲ್ಲಿ ಶುಕ್ರವಾರ ಬೆಳಿಗ್ಗೆ ಕೆಲ ಅಜ್ಞಾತರು ಪೊಲೀಸರಿಗೆ ನಕಲಿ ಬಾಂಬ್ ಕರೆ ನೀಡಿ ಗಲಿಬಿಲಿಗೊಳಿಸಿದ್ದಾರೆ. ಖ್ಯಾತ ನಟಿ ತ್ರಿಷಾ ಸೇರಿದಂತೆ ಹಲವು ಗಣ್ಯರ ಮನೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಧಮ್ಕಿ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ತುರ್ತು ಕ್ರಮ ಕೈಗೊಂಡಿದ್ದಾರೆ. ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ಸಹಿತ ಪೊಲೀಸರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಎಲ್ಲ ಕರೆಗಳೂ ನಕಲಿ ಎಂದು ಸ್ಪಷ್ಟಪಡಿಸಿದರು.
ನಟಿ ತ್ರಿಷಾ ಅವರ ತೇನಮ್ಪೇಟ್ ನಿವಾಸ, ಮುಖ್ಯಮಂತ್ರಿ ಸ್ಟಾಲಿನ್ ಅವರ ಮನೆ, ರಾಜ್ಯಪಾಲರ ಭವನ, ತಮಿಳುನಾಡು ಬಿಜೆಪಿ ರಾಜ್ಯ ಕಚೇರಿ ಮತ್ತು ನಟ-ರಾಜಕಾರಣಿ ಎಸ್ವಿ ಶೇಖರ್ ಅವರ ಮನೆಗಳಿಗೆ ಬಾಂಬ್ ಇರಿಸಲಾಗಿದೆ ಎಂಬ ಕರೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ತ್ರಿಷಾ ಮತ್ತು ಸ್ಟಾಲಿನ್ ಅವರ ಅಧಿಕೃತ ನಿವಾಸ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ವಿಸ್ತೃತ ಶೋಧ ಕಾರ್ಯಾಚರಣೆ ನಡೆಸಿದರು. ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗದೆ, ಕರೆಗಳು ನಕಲಿಯಾಗಿವೆ ಎಂದು ದೃಢಪಟ್ಟಿದೆ.
ಈ ನಕಲಿ ಕರೆಗಳ ಹಿಂದೆ ನಟ ವಿಜಯ್ ಅಭಿಮಾನಿಗಳ ಕೈ ಇರಬಹುದು ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 41 ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಸಿಎಂ ಸ್ಟಾಲಿನ್ ಪೊಲೀಸರು ಗಂಭೀರ ತನಿಖೆಗೆ ಆದೇಶಿಸಿದ್ದರು ಮತ್ತು ವಿಜಯ್ ಪಕ್ಷದ ಕೆಲವು ಮುಖಂಡರು ಬಂಧಿತರಾಗಿದ್ದರು. ಈ ಘಟನೆಗೆ ಸಂಬಂಧಿಸಿ ನಟಿ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಮೃತರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ವಿಜಯ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ನಟ-ರಾಜಕಾರಣಿ ಎಸ್ವಿ ಶೇಖರ್ ಕೂಡ ಈ ಘಟನೆ ಕುರಿತು ವಿಜಯ್ ಅವರನ್ನು ತೆರೆದಟೀಕಿಸಿದ್ದರು. ವಿಜಯ್ ಅವರಿಗೆ ಬಿಜೆಪಿ ರಾಜಕೀಯ ವಿರೋಧಿಯಾಗಿರುವುದರಿಂದ, ಇವರನ್ನೇ ಗುರಿಯಾಗಿಸಿ ಬಾಂಬ್ ಇರಿಸಿರುವಂತೆ ನಕಲಿ ಕರೆ ಮಾಡಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಳ್ಳು ಕರೆ ಮಾಡಿದವರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ