ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಬಾಂಬ್ ಬೆದರಿಕೆ ಸಂದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಚಿಕ್ಕಪೇಟೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಬೆಳಗ್ಗೆ ಅಜ್ಞಾತ ವ್ಯಕ್ತಿಯಿಂದ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದ ಹಿನ್ನೆಲೆಯಲ್ಲಿ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಹೈ ಅಲರ್ಟ್ ಘೋಷಿಸಿದರು.
ಬಾಂಬ್ ಬೆದರಿಕೆಯ ಕಾರಣದಿಂದ ಕಚೇರಿ ಸಿಬ್ಬಂದಿಗಳನ್ನು ತಕ್ಷಣ ಕಟ್ಟಡದ ಹೊರಗೆ ಸ್ಥಳಾಂತರಿಸಿ, ಸಂಪೂರ್ಣ ಪ್ರದೇಶವನ್ನು ಖಾಲಿ ಮಾಡಲಾಯಿತು. ಸ್ಥಳಕ್ಕೆ ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರೀಯ ದಳ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದ ತಂಡಗಳು ಆಗಮಿಸಿ ಕಟ್ಟಡದ ಪ್ರತಿಯೊಂದು ವಿಭಾಗದಲ್ಲಿ ಸುದೀರ್ಘ ಪರಿಶೀಲನೆ ನಡೆಸಿವೆ.
ಪರಿಶೀಲನೆಯ ಅವಧಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶಂಕಾಸ್ಪದ ವಸ್ತುಗಳು ಏನಾದರೂ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟಡದ ಒಳಹೊರಗೆ ಸಂಪೂರ್ಣ ಶೋಧ ಕಾರ್ಯ ನಡೆಸಿದರು. ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ಬಾಂಬ್ ಬೆದರಿಕೆ ಸಂದೇಶ ಯಾರು ಕಳುಹಿಸಿದ್ದಾರೆ ಎನ್ನುವ ವಿಚಾರದಲ್ಲಿ ತನಿಖೆ ಮುಂದುವರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




