ರಾಜ್ಯದಲ್ಲಿ ಹೊಸದಾಗಿ BPL ಕಾರ್ಡ್ ಪಡೆಯಲು 3.96 ಲಕ್ಷ ಅರ್ಜಿಗಳು ಆಹಾರ ಇಲಾಖೆಗೆ ಸಲ್ಲಿಸಿದ್ದರೆ, ಇದರ 2.95 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಂಗಳವಾರ ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಅನರ್ಹರನ್ನು ಪತ್ತೆ ಹಚ್ಚಿ, ಅರ್ಹರಿಗೆ ಮಾತ್ರ BPL ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವರಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರ ಈ ವರ್ಷ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅವಕಾಶ ನೀಡಿದ್ದು, ಈಗಾಗಲೇ 2.57 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಜೊತೆಗೆ, 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬಳ್ಳಾರಿ ಮತ್ತು ಕಲಬುರಗಿ ವಿಭಾಗದಲ್ಲಿ ಒಟ್ಟು 78 ಸಕ್ಕರೆ ಕಾರ್ಖಾನೆಗಳು ಇವೆ. ರೈತರು ಮತ್ತು ಕಬ್ಬು ಬೆಳೆಗಾರರಿಗೆ ತೂಕ ಹಾಗೂ ಅಳತೆಯಲ್ಲಿ ಮೋಸ ಆಗದಂತೆ 71 ಕಾರ್ಖಾನೆಗಳಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈವರೆಗೂ ಯಾವುದೇ ದೂರುಗಳು ಬಂದಿಲ್ಲ. ಮೋಸ ಪತ್ತೆಯಾಗಿದರೆ ತಕ್ಷಣ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ಬಜೆಟ್ ಘೋಷಣೆನಂತೆ, ಹೊಸದಾಗಿ ಪ್ರತಿ ಜಿಲ್ಲೆಯಲ್ಲಿ ಅಂಗಡಿ ತೆರೆಯಲು ತೀರ್ಮಾನಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಪ್ರತಿ ಜಿಲ್ಲೆಗಳಲ್ಲಿ ಸಮಿತಿಗಳ ಸಭೆ ನಡೆಯಲಿದೆ. ಹೊಸ ಒಳ ಮೀಸಲಾತಿ ಅನ್ವಯ 3,517 ಎಸ್ಸಿ-ಎಸ್ಟಿ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿ ಸಿಗಲಿದೆ. ರಾಜ್ಯದ ಯಾವುದೇ ಭಾಗದಲ್ಲಿ ಧಾನ್ಯಗಳ ಸರಬರಾಜಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




