ವಿದ್ಯುತ್ ಮೀಟರ್ ಮಾಪನ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್ಗಳ ಅಕ್ರಮಗಳನ್ನು ತಡೆಯಲು ಬೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಸ್ವಯಂಚಾಲಿತ ಆಪ್ಟಿಕಲ್ ಪೋರ್ಟ್ ಪ್ರೊಬ್ ಮೀಟರ್ ರೀಡಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಕೇವಲ ಐದು ತಿಂಗಳಲ್ಲೇ ಸುಮಾರು ₹120 ಕೋಟಿ ಆದಾಯ ಸೋರಿಕೆ ತಡೆಯಲು ಸಾಧ್ಯವಾಗಿದೆ.
ಈ ಹಿಂದೆ ಬೆಸ್ಕಾಂ ಮೀಟರ್ ರೀಡರ್ಗಳು ಹಣದಾಸೆಗೆ ಕೆಲವು ಗ್ರಾಹಕರೊಂದಿಗೆ ಕೈಜೋಡಿಸಿ, ವಿದ್ಯುತ್ ಮಾಪನದಲ್ಲಿ ಕಳ್ಳಾಟ ನಡೆಸುತ್ತಿದ್ದ ಆರೋಪಗಳು ಕೇಳಿಬಂದಿದ್ದವು. ವಿದ್ಯುತ್ ಬಿಲ್ನ ಆರ್ಥಿಕ ಹೊರೆಯಿಂದ ಪಾರಾಗಲು ಕೆಲ ಗ್ರಾಹಕರು ಮೀಟರ್ ರೀಡರ್ಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ಹೆಚ್ಚು ವಿದ್ಯುತ್ ಬಳಕೆಯಾದರೂ ಕಡಿಮೆ ಯೂನಿಟ್ಗಳನ್ನು ದಾಖಲಿಸುವಂತೆ ಮಾಡುತ್ತಿದ್ದರು. ಇದರಿಂದ ಕಡಿಮೆ ಬಿಲ್ ಬರುತ್ತಿದ್ದು, ಬೆಸ್ಕಾಂಗೆ ಕೋಟಿಗಟ್ಟಲೆ ಆದಾಯ ನಷ್ಟವಾಗುತ್ತಿತ್ತು.
ಇನ್ನೊಂದೆಡೆ, ಕೆಲವು ಮೀಟರ್ ರೀಡರ್ಗಳು ಬಳಕೆಯಿಗಿಂತ ಹೆಚ್ಚಿನ ಯೂನಿಟ್ಗಳನ್ನು ಬಿಲ್ನಲ್ಲಿ ನಮೂದಿಸುತ್ತಿದ್ದಾರೆ ಎಂಬ ದೂರುಗಳೂ ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬಂದಿದ್ದವು. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಬೆಸ್ಕಾಂ 2025ರ ಆಗಸ್ಟ್ನಿಂದ ಆಪ್ಟಿಕಲ್ ಪೋರ್ಟ್ ಪ್ರೊಬ್ ಮೀಟರ್ ರೀಡಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಬೆಸ್ಕಾಂ ವ್ಯಾಪ್ತಿಯ 9 ವೃತ್ತಗಳಲ್ಲಿ ಒಟ್ಟು ಸುಮಾರು 1.10 ಕೋಟಿ LT ವಿದ್ಯುತ್ ಸಂಪರ್ಕ ಮೀಟರ್ಗಳಿದ್ದು, ಈ ಪೈಕಿ ಸದ್ಯ 57.08 ಲಕ್ಷ ಮೀಟರ್ಗಳನ್ನು ನೂತನ ವ್ಯವಸ್ಥೆಯಡಿ ಮಾಪನ ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಮೀಟರ್ ರೀಡರ್ಗಳು ಪ್ರತಿ ಕಟ್ಟಡಕ್ಕೂ ಭೇಟಿ ನೀಡಿ, ಸ್ಪಾಟ್ ಬಿಲ್ಲಿಂಗ್ ಉಪಕರಣದ ಮೂಲಕ ಮಾಪನ ನಡೆಸುತ್ತಾರೆ.
ಕೇಬಲ್ ಅಥವಾ ಬ್ಲೂಟೂತ್ ಮೂಲಕ ಉಪಕರಣವನ್ನು ಮೀಟರ್ಗೆ ಸಂಪರ್ಕಿಸಿದ ಕೂಡಲೇ, ಮಾಪನ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯುತ್ತದೆ ಮತ್ತು ತಕ್ಷಣವೇ ಬಿಲ್ ಪ್ರತಿ ಹೊರಬರುತ್ತದೆ. ಸ್ಪಾಟ್ ಬಿಲ್ಲಿಂಗ್ ಉಪಕರಣದಲ್ಲಿ ಅಳವಡಿಸಿರುವ ವಿಶೇಷ ಸಾಫ್ಟ್ವೇರ್ನಿಂದ ಮಾಪನ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್ಗಳ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಇದರಿಂದ ನಿಖರತೆ, ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಾಗಿದೆ.
ವರದಿ :ಲಾವಣ್ಯ ಅನಿಗೋಳ




