ರೀಲ್ಸ್ ರಾಜಕೀಯಕ್ಕೆ ಬ್ರೇಕ್; ಹೈಕೋರ್ಟ್ ವಾರ್ನಿಂಗ್!

ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ವೇಳೆ, ರೀಲ್ಸ್ ಹಾಗೂ ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದು ಒಪ್ಪಲಾಗದು ಎಂದು ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಪುನೀತ್ ಕೆರೆಹಳ್ಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಗೆ ತಾತ್ಕಾಲಿಕ ತಡೆ ನೀಡಿದೆ.

ಜೊತೆಗೆ, ಎರಡು ವಾರಗಳೊಳಗೆ ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸಿ ಹೇಳಿಕೆ ದಾಖಲಿಸಬೇಕು. ಇಲ್ಲದಿದ್ದರೆ ಮಧ್ಯಂತರ ಆದೇಶ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು ಎಂದು ಪುನೀತ್ ಕೆರೆಹಳ್ಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರ ಪರ ವಕೀಲ ಪಿ.ಎನ್. ಮನಮೋಹನ್ ಅವರು, ಜನವರಿ 13ರಂದು ಅಂತಿಮ ನೋಟಿಸ್ ನೀಡಿ, ಜನವರಿ 16ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಮರುದಿನವೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಅರ್ಜಿದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಿಲ್ಲ ಎಂದು ನ್ಯಾಯಪೀಠದ ಗಮನ ಸೆಳೆದರು.

ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಮತ್ತೊಂದು ಪ್ರಕರಣದಲ್ಲಿ ಜಾಮೀನು ಬಾಂಡ್ ಸಲ್ಲಿಸುವಂತೆ ನೀಡಿದ ಆದೇಶವನ್ನು ಪುನೀತ್ ಪಾಲಿಸಿಲ್ಲ ಎಂದು ತಿಳಿಸಿದರು. ಈ ಸಂಬಂಧ ನೋಟಿಸ್ ಜಾರಿಯಾಗಿದ್ದು, ಅವರು ಹಾಜರಾಗಿ ಹೇಳಿಕೆ ನೀಡಬೇಕು. ಅವರ ವಿರುದ್ಧ ತಕ್ಷಣ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದರು.

ಸುನಾವಣೆ ವೇಳೆ ನ್ಯಾಯಪೀಠ, ಮತ್ತೆ ಗಲಾಟೆ ಮಾಡಿದ್ದೀರಾ? ಸುಮ್ಮನೆ ಇರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ನಿಮ್ಮ ವಿರುದ್ಧದ ಪ್ರಕರಣ ರದ್ದಾಗಿಲ್ಲ, ಕೇವಲ ತಡೆ ನೀಡಲಾಗಿದೆ ಎಂದು ಪುನೀತ್ ಪರ ವಕೀಲರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇನ್ನೂ, ರೀಲ್ಸ್ ಮತ್ತು ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಈ ರೀತಿಯ ವರ್ತನೆ ಸಲ್ಲದು. ಅರ್ಜಿದಾರರು ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಪೀಠ ಕಿವಿಮಾತು ಹೇಳಿತು.

ವರದಿ : ಲಾವಣ್ಯ ಅನಿಗೋಳ

About The Author