www.karnatakatv.net : ರಾಯಚೂರು ತಾಲೂಕಿನ ಶಕ್ತಿನಗರ ಬಳಿ ಇರುವ ಕೃಷ್ಣ ನದಿ ಮೇಲೆ ನಿರ್ಮಿಸಲಾದ 80 ವರ್ಷದ ಹಳೆಯ ಬೃಹತ್ ಸೇತುವೆ ಸದ್ಯ ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಅದ್ಯಾವ ಘಳಿಗೆಯಲ್ಲಾದ್ರೂ ಈ ಸೇತುವೆ ಕುಸಿದು ಬೀಳೋ ಹಂತಕ್ಕೆ ತಲುಪಿದೆ. ಈ ಬೃಹತ್ ಸೇತುವೆ ಮೇಲೆ ಭಾರಿ ಗಾತ್ರದ ವಾಹನಗಳ ಓಡಾಟದಿಂದ ಸೇತುವೆಯ ಕೆಳಭಾಗದಲ್ಲಿ ಮಣ್ಣು ಸಹ ಕಳಚಿ ಬೀಳ್ತಿದೆ. ಅಷ್ಟೇ ಅಲ್ಲ ಸೇತುವೆ ಮೇಲೆ ಹಾಕಲಾಗಿರುವ ಕಾಂಕ್ರೀಟ್, ಕಬ್ಬಿಣದ ರಾಡುಗಳು ಕಿತ್ತು ಹೊರಗೆ ಬಂದಿವೆ.. ಹೀಗೆ ಆದ್ರೆ ಅಪಾಯ ಗ್ಯಾರೆಂಟಿ ಅಂತಾರೆ ಸ್ಥಳೀಯರು.
ಇನ್ನು ಇತ್ತೀಚೆಗೆ ಬಂದ ಕೃಷ್ಣ ನದಿಯ ಪ್ರವಾಹದ ಹೊಡೆತಕ್ಕೂ ಈ ಸೇತುವೆ ನಲುಗಿ ಹೋಗಿದೆ. ಹಲವಾರು ಕಡೆ ಬಿರುಕುಬಿಟ್ಟಿದ್ದು, ಕಾಂಕ್ರೀಟ್ ಮಣ್ಣು ಸಹ ಕಳಚಿ ಬೀಳ್ತಿದೆ. ಕರ್ನಾಟಕ ಮತ್ತು ತೆಲಂಗಾಣಕ್ಕೆ ಸಂಪರ್ಕಿಸೋ ಈ ಬೃಹತ್ ಸೇತುವೆ ಸದ್ಯ ಕುಸಿದು ಬೀಳೋ ಸ್ಥಿತಿಯಲ್ಲಿದ್ದು, ಆದಷ್ಟು ಬೇಗ ನೂತನ ಸೇತುವೆ ನಿರ್ಮಾಣ ಮಾಡದಿದ್ರೆ, ಅನಾಹತ ತಪ್ಪಿದ್ದಲ್ಲ.
ಇನ್ನು ಕೃಷ್ಣ ನದಿಯ ಮೇಲೆ ನಿಜಾಮನ ಕಾಲದಲ್ಲಿ ನಿರ್ಮಿಸಲಾದ ಈ ಬೃಹತ್ ಸೇತುವೆಯ ಸ್ಥಿತಿಯನ್ನ ಗಮನಿಸಿ ರಾಯಚೂರು ಜಿಲ್ಲಾಡಳಿತ ನೂತನ ಸೇತುವೆ ನಿರ್ಮಾಣ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸೇತುವೆ ಕುಸಿದುಬಿದ್ರೆ ತೆಲಂಗಾಣ-ಹೈದರಾಬಾದ್ ಸಂಪರ್ಕ ಕಡಿತಗೊಳ್ಳಲಿದೆ.
ಇನ್ನು ಈ ಸೇತುವೆ ದುರಸ್ಥಿಗೆಂದು ಈಗಾಗಲೇ 20 ಕೋಟಿಗೂ ಅಧಿಕ ಹಣ ಮಂಜೂರಾಗಿತ್ತು. ಗುತ್ತಿಗೆದಾರರಿಗೂ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.. ಆದ್ರೆ ಆ ಗುತ್ತಿಗೆದಾರ ಕೋವಿಡ್ ಗೆ ಬಲಿಯಾಗಿದ್ದಾನೆ. ಹೀಗಾಗಿ ಸದ್ಯ ಆ ಕೆಲಸಕ್ಕೆ ಯಾವೊಬ್ಬ ಗುತ್ತಿಗೆದಾರನೂ ಸೇತುವೆ ನವೀಕರಣಕ್ಕೆ ಮುಂದೆ ಬರ್ತಿಲ್ಲ. ಹೀಗಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಭಾರಿ ಹಿನ್ನಡೆಯಾಗ್ತಿದೆ. ಈ ಬಗ್ಗೆ ಶಾಸಕರನ್ನ ಕೇಳಿದ್ರೆ ಟೆಂಡರ್ ಫೈನಲೈಸ್ ಆಗಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗುತ್ತೆ ಅಂತಾರೆ.
ವಿಪರ್ಯಾಸ ಅಂದ್ರೆ ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಎನ್ನುವ ಹಾಗೆ, ಕುಸಿದು ಬೀಳೋ ಸ್ಥಿತಿಯಲ್ಲಿರೋ ಸೇತುವೆ ಮೇಲೆ ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದೇ ತೆರಳುವಂತಾಗಿದೆ.
ಒಟ್ನಲ್ಲಿ ಅಪಾಯದ ಅಂಚಿನಲ್ಲಿರೋ ಕೃಷ್ಣಾ ಸೇತುವೆಯನ್ನ ಆದಷ್ಟು ಬೇಗ ಪುನರ್ ನವೀಕರಿಸಿ ಸೇತುವೆ ದುರಸ್ಥಿ ಕಾರ್ಯಕ್ಕೆ ಸರ್ಕಾರ ತ್ವರಿತ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದ್ರೆ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು.