ಕೇರಳದ ಕಲ್ಯಾಡ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಯುವತಿ ದರ್ಶಿತಾಳನ್ನು ಕೊಲೆ ಮಾಡಲಾಗಿದೆ. ಬಾಯಲ್ಲಿ ಸ್ಫೋಟಕ ತುರುಕಿ ಸ್ಫೋಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಲಾಡ್ಜ್‌ನಲ್ಲಿ ದರ್ಶಿತಾಳ ಮೃತದೇಹ ಪತ್ತೆಯಾಗಿದೆ. ದರ್ಶಿತಾಳ ಸ್ನೇಹಿತ ಸಿದ್ದರಾಜುನನ್ನು ಸಾಲಿಗ್ರಾಮ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದರ್ಶಿತಾ ಗಂಡನ ಮನೆಯಿಂದ 30 ಪವನ್ ಚಿನ್ನ ಮತ್ತು ನಾಲ್ಕು ಲಕ್ಷ ರೂಪಾಯಿ ಕಳುವಾಗಿದೆ. ಕಳ್ಳತನವಾದ ದಿನವೇ ದರ್ಶಿತಾ ಮನೆಗೆ ಬೀಗ ಹಾಕಿ ಕರ್ನಾಟಕಕ್ಕೆ ಬಂದಿದ್ದಳು. ಚಿನ್ನ ಮತ್ತು ಹಣ ಕಳ್ಳತನದ ಹಿಂದೆ ದರ್ಶಿತಾ ಮತ್ತು ಆಕೆಯ ಸ್ನೇಹಿತನ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ದರ್ಶಿತಾ ಗಂಡ ದುಬೈನಲ್ಲಿರುವ ಮಾಹಿತಿ ಗೊತ್ತಾಗಿದೆ.
ಕೊಲೆಯಾದ ದರ್ಶಿತಾ ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕೇರಳ ಮೂಲದ ಕಾರ್ಮಿಕನೊಬ್ಬನನ್ನು ಮದುವೆಯಾಗಿದ್ದರು. ಮದುವೆಯಾದ್ರೂ ಸಂಬಂಧಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಸಿದ್ದರಾಜು ಜೊತೆ ಅಕ್ರಮ ಸಂಬಂಧ ಹೊಂದಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ದೇವಸ್ಥಾನಕ್ಕೆ ಹೋಗೋಣ ಎಂದು ದರ್ಶಿತಾಳನ್ನು ಸಿದ್ದರಾಜು ಕರೆಸಿಕೊಂಡಿದ್ದನು.
ಭೇರ್ಯ ಗ್ರಾಮದ ಎಸ್.ಜಿ.ಆರ್ ವಸತಿಗೃಹದಲ್ಲಿ ಕೊಠಡಿಯಲ್ಲಿರುವಾಗ ಸಿದ್ದರಾಜು ಮತ್ತು ದರ್ಶಿತಾ ನಡುವೆ ಗಲಾಟೆ ನಡೆದಿದೆ. ಈ ವೇಳೆ ದರ್ಶಿತಾ ಬಾಯಿಗೆ ಜಿಲೆಟಿನ್ ಕಡ್ಡಿ ಸಿಡಿಸಿ ಹತ್ಯೆ ಮಾಡಿದ್ದಾನೆ. ನಂತರ ಮೊಬೈಲ್ ಬ್ಲಾಸ್ಟ್ ಆಗಿದೆ ಎಂದು ಸುಳ್ಳು ಕಥೆ ಹೇಳಿದ್ದನು. ಸ್ಥಳದಿಂದ ಓಡಿ ಹೋಗುತ್ತಿದ್ದ ಸಿದ್ದರಾಜನನ್ನು ಹಿಡದು ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿ ಸಿದ್ದರಾಜುನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಘಟನೆ ಸಂಬಂಧ ಲಾಡ್ಜ್ ಸಿಬ್ಬಂದಿ ಮನು ಎಂಬವರು ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಸಾಲಿಗ್ರಾಮ ಇನ್‌ಸ್ಪೆಕ್ಟರ್‌ಶಶಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ