ಬೆಂಗಳೂರು: ವಿಧಾನಸಭೆಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಗೆಲುವಿನ ನಗೆ ಬೀರಿದೆ. ಇನ್ನು 14 ತಿಂಗಳು ಆಡಳಿತ ನಡೆಸಿದ್ದ ರಾಜ್ಯ ಸರ್ಕಾರದ ಆಡಳಿತ ಶೈಲಿಯಿಂದ ಜನ ಬೇಸತ್ತಿದ್ದರು. ಇನ್ನು ಮುಂದೆ ಅಭಿವೃದ್ಧಿ ಪರ್ವ ಶುರು ಅಂತ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮೈಲುಗೈ ಸಾಧಿಸಿದ ಬಿಜೆಪಿ ಕೊನೆಗೂ ರಾಜ್ಯದಲ್ಲಿ ಕೇಸರಿ ಪತಾಕೆ ಹಾರಿಸಲು ಸಜ್ಜಾಗಿದೆ. ವಿಶ್ವಾಸಮತ ಪ್ರಕ್ರಿಯೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಇದು ಪ್ರಜಾಪ್ರಭುತ್ವದ ಗೆಲುವು. ಸಿಎಂ ಕುಮಾರಸ್ವಾಮಿಯವರ 14 ತಿಂಗಳ ಕೆಟ್ಟ ಆಡಳಿತದಿಂದ ರಾಜ್ಯದ ಜನ ಬೇಸತ್ತಿದ್ದರು. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಈಗಾಗಲೇ ಶುರುವಾಗಿದೆ. ಮುಖ್ಯವಾಗಿ ರಾಜ್ಯದ ಅನ್ನದಾತರಾದ ರೈತರು ಭೀಕರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡುತ್ತೇವೆ ಅಂತ ಯಡಿಯೂರಪ್ಪ ಭರವಸೆ ನೀಡಿದ್ರು.
ಇನ್ನು ರಾಜ್ಯದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ರಾಜ್ಯಪಾಲರನ್ನು ಭೇಟಿಯಾಗಿ ಬಿಜೆಪಿ ಚರ್ಚೆ ನಡೆಸಲಿದೆ. ಗುರುವಾರವೇ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ಗೆಲುವಿಗೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.