ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆ ನಡೆದ ವಿಶ್ವಾಸಮತ ಪ್ರಕ್ರಿಯೆಗೆ ಗೈರಾಗಿ ಆಶ್ಚರ್ಯ ಮೂಡಿಸಿದ್ದ ಬಿಎಸ್ಪಿ ಶಾಸಕ ಎನ್.ಮಹೇಶ್ ಉಚ್ಚಾಟನೆಯಾಗಿದ್ದಾರೆ. ಇನ್ನು ನಿನ್ನೆಯ ಕಲಾಪಕ್ಕೆ ತಾವು ಗೈರುಹಾಜರಿಯ ಕುರಿತಾಗಿ ಕಾರಣವನ್ನು ಬಿಎಸ್ಪಿ ಶಾಸಕ ಮಹೇಶ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ಪಿಯ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲವೆಂಬ ಕಾರಣಕ್ಕೆ ನನ್ನನ್ನು ಉಚ್ಚಾಟನೆ ಮಾಡಲಾಗಿದೆ. 2018ರ ವಿಧಾನಸಭಾ ಚುವನಾವಣೆಯಲ್ಲಿ ಬಿಎಸ್ಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆಯಿಂದ ಚುನಾವಣೆ ಎದುರಿಸಿದ್ದೆವು. ಕೊಳ್ಳೇಗಾಲದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಶಾಸಕನಾಗಿ ಗೆದ್ದು ಬಂದೆ. ಬಳಿಕ ಅತಂತ್ರ ಫಲಿತಾಂಶ ಹೊರಬರುತ್ತಿದ್ದಂತೆ ನಾನು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ನಾನು ಬೆಂಬಲ ನೀಡಿ ಸಚಿವನಾಗಿ 4 ತಿಂಗಳ ಕಾಲ ಮೈತ್ರಿಯಲ್ಲಿ ಮುಂದುವರಿದೆ. ಬಳಿಕ ಮಾಯಾವತಿಯವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತ ಸೂಚಿಸಿದ್ದರು. ಅದರಂತೆ ರಾಜೀನಾಮೆಯನ್ನೂ ನೀಡಿ ನನ್ನ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಕೊಂಡೆ ಎಂದರು.
ಇನ್ನು ವಿಶ್ವಾಸಮತ ಯಾಚನೆಯಲ್ಲಿ ಭಾಗಿಯಾಗುವದರ ಕುರಿತಂತೆ ನಾನು ಪಕ್ಷದ ವರಿಷ್ಠರಾದ ಮಾಯಾವತಿಯವರನ್ನು ಕೇಳಿದೆ. ವಿಪಕ್ಷ ಸ್ಥಾನದಲ್ಲಿ ಕೂರಬೇಕಾ ಅಂತ ಕೇಳಿದಾಗ ಬೇಡ ನೀನು ಸ್ವತಂತ್ರವಾಗಿಯೇ ಇರು, ವಿಶ್ವಾಸಮತ ಯಾಚನೆ ಮತ ಚಲಾವಣೆ ಕುರಿತು ನೀನು ತಟಸ್ಥನಾಗಿರು ಅಂತ ಹೇಳಿದ್ದರು. ಹೀಗಾಗಿ ನಾನು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಅಂತ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಸ್ಪಷ್ಟನೆ ನೀಡಿದ್ರು.
ಬಳಿಕ ಮಾತನಾಡಿದ ಮಹೇಶ್, ಹೈಕಮಾಂಡ್ ನ ಯಾವುದೇ ಆದೇಶ ಉಲ್ಲಂಘನೆ ಮಾಡಿಲ್ಲ, ಅಶಿಸ್ತಿನಿಂದ ನಡೆದುಕೊಂಡಿಲ್ಲ ಆದರೂ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಅಂತ ಬೇಸರ ವ್ಯಕ್ತಪಡಿಸಿದ್ರು.