ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿಯನ್ನು ಮುಸ್ಲಿಂ ಸಮುದಾಯದವರೇ ಸ್ವತಃ ನೆಲಸಮಗೊಳಿಸಿರುವ ಘಟನೆ ವರದಿಯಾಗಿದೆ. ಸಂಭಾಲ್ ಜಿಲ್ಲೆಯ ಕೊಳದ ಮೇಲೆ ನಿರ್ಮಿಸಲಾದ ಈ ಮಸೀದಿಯನ್ನು ಮಸೀದಿ ಸಮಿತಿ ಮತ್ತು ಸ್ಥಳೀಯ ಮುಸ್ಲಿಮರು ಬುಲ್ಡೋಜರ್‌ಗಳ ಸಹಾಯದಿಂದ ತೆರವುಗೊಳಿಸಲು ಮುಂದಾಗಿದ್ದಾರೆ. ಆಡಳಿತದಿಂದ ಬಂದ ನೋಟಿಸ್ ಹಾಗೂ ಅಂತಿಮ ಎಚ್ಚರಿಕೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, ಮಸೀದಿಯ ಮೇಲ್ಭಾಗವನ್ನು ಹಿಂದೆ ಸುತ್ತಿಗೆ ಮತ್ತು ಉಳಿ ಬಳಸಿ ತೆರವುಗೊಳಿಸಲಾಗುತ್ತಿತ್ತು. ಈಗ ಉಳಿದ ಭಾಗವನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಇದಕ್ಕೂ ಮುನ್ನ, ಮಸೀದಿ ಸಮಿತಿ ಹೈಕೋರ್ಟ್‌ನಲ್ಲಿ ತೆರವಿಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿತ್ತು. ಆದರೆ, ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿ ತಡೆ ನೀಡಲು ನಿರಾಕರಿಸಿತ್ತು.
ಅದಾದ ನಂತರ, ಸಂಭಾಲ್ ಜಿಲ್ಲಾಡಳಿತವು ಸ್ಥಳಕ್ಕೆ ಬುಲ್ಡೋಜರ್‌ಗಳನ್ನು ಕಳುಹಿಸಿತ್ತು. ಆದರೆ ಸ್ಥಳೀಯರ ಮನವಿಯನ್ನು ಪರಿಗಣಿಸಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮಸೀದಿ ಸಮಿತಿಗೆ ಅಕ್ರಮ ನಿರ್ಮಾಣವನ್ನು ಸ್ವತಃ ತೆರವುಗೊಳಿಸಲು ನಾಲ್ಕು ದಿನಗಳ ಗಡುವು ನೀಡಿದ್ದರು. ಈಗ, ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದ ಮುಸ್ಲಿಮರು ತಮ್ಮ ಕೈಯಿಂದಲೇ ಗೌಸುಲ್‌ಬರಾ ಮಸೀದಿಯ ತೆರವು ಕಾರ್ಯ ಆರಂಭಿಸಿದ್ದಾರೆ. ಜಿಲ್ಲಾಡಳಿತ ನೀಡಿದ್ದ ನಾಲ್ಕು ದಿನಗಳ ಗಡುವು ಮುಗಿದ ನಂತರ ಈ ಕ್ರಮ ಜಾರಿಯಾಗಿದೆ.
ಮಸೀದಿ ಸಮಿತಿಯ ಸದಸ್ಯ ಹಾಗೂ ರಾಯಾ ಬುಜುರ್ಗ್ ಗ್ರಾಮದ ನಿವಾಸಿ ಯಾಸಿನ್ ಹೇಳುವಂತೆ, ನಮಗೆ ನೀಡಲಾಗಿದ್ದ ನಾಲ್ಕು ದಿನಗಳ ಅವಧಿ ಇಂದು ಮುಗಿದಿದೆ. ಜಿಲ್ಲಾಡಳಿತದ ಸೂಚನೆಯಂತೆ ನಾವು ತಾವೇ ಮಸೀದಿಯನ್ನು ತೆರವುಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಗಮನಾರ್ಹವಾಗಿ, ಅಕ್ಟೋಬರ್ 2ರಂದು ಇದೇ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದುವೆ ಮಂಟಪವನ್ನೂ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಧ್ವಂಸಗೊಳಿಸಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ