ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನ, ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಎಲ್ಲ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ’. ಹೀಗಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಚುನಾವಣಾ ಕರ್ತವ್ಯಗಳಿಂದ ಮುಕ್ತಿಯನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದರು. ಈಗ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣಾ ಕೆಲಸಗಳಿಂದ ವಿನಾಯಿತಿ ನೀಡಿರುವುದರಿಂದ ಅವರು ತಮ್ಮ ಮೂಲ ಕೆಲಸಗಳಿಗೆ ಹೆಚ್ಚಿನ ಗಮನ ಹರಿಸಬಹುದಾಗಿದೆ. ಮಕ್ಕಳು ಹಾಗೂ ತಾಯಂದಿರ ಮೇಲೆ ಉತ್ತಮ ಆರೋಗ್ಯ ಹಾಗೂ ಶೈಕ್ಷಣಿಕ ಫಲಿತಾಂಶ ಕಂಡುಬರಲಿದೆ.
ಮುಂದಿನ ಅಕ್ಟೋಬರ್‌ನಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಲಿರುವ ಕಾರಣ, ಕಾರ್ಯಕರ್ತೆಯರ ಮೇಲೆ ಕೆಲಸದ ಹೊರೆ ಇರುತ್ತದೆ. ಈ ಹೊತ್ತಿನಲ್ಲಿ ಅವರನ್ನು ಚುನಾವಣಾ ಕರ್ತವ್ಯಗಳಿಂದ ಮುಕ್ತಗೊಳಿಸುವುದು ಸೂಕ್ತವಾಗಿದೆ.
ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಬೇಕಿದೆ. ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರು, ಚುನಾವಣಾ ಕೆಲಸಗಳಿಂದ ವಿನಾಯಿತಿ ಪಡೆಯಲಿದ್ದಾರೆ. ಕಾರ್ಯಕರ್ತೆಯರ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ

