ದೀಪಾವಳಿ ಹಬ್ಬದ ವೇಳೆಗೆ ಸರಕು ಮತ್ತು ಸೇವಾ ತೆರಿಗೆ ಅಂದ್ರೆ ಜಿಎಸ್ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸಣ್ಣ ಕಾರುಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಈ ಸಂಬಂಧ ಮಹತ್ವದ ಘೋಷಣೆ ಮಾಡಿದ್ದು, ಜಿಎಸ್ಟಿ ಪರಿಷ್ಕರಣೆ ಪ್ರಸ್ತಾಪಗಳು ಚರ್ಚೆಗೆ ಒಳಪಡುತ್ತವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ವಾರ ಜಿಎಸ್ಟಿ ಕುರಿತು ಸಚಿವರ ಸಮಿತಿಯು (GoM) ಸಭೆ ನಡೆಸಲಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಯುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಲಿದೆ. ಎಂಜಿನ್ ಸಾಮರ್ಥ್ಯ ಹಾಗೂ ಕಾರುಗಳ ಗಾತ್ರದ ಆಧಾರದಲ್ಲಿ ತೆರಿಗೆ ಬದಲಾವಣೆ ರೂಪುಗೊಳ್ಳಲಿದೆ.
ಪ್ರಸ್ತುತ ಪೆಟ್ರೋಲ್ ಚಾಲಿತ ಸಣ್ಣ ಕಾರುಗಳ ಮೇಲೆ ಶೇ.28 ರಷ್ಟು ಜಿಎಸ್ಟಿ ಹಾಗೂ ಶೇ.1ರಿಂದ ಶೇ.22ರ ನಡುವೆ ಪರಿಹಾರ ಸೆಸ್ ವಿಧಿಸಲಾಗುತ್ತಿದೆ. ಇದರಿಂದ ಒಟ್ಟು ತೆರಿಗೆ ಶೇ.29ರಿಂದ ಶೇ.50ರ ನಡುವೆ ಇರುತ್ತದೆ. ಎಲೆಕ್ಟ್ರಿಕ್ ಕಾರುಗಳ ಮೇಲಿನ ಜಿಎಸ್ಟಿ ಶೇ.5 ಕ್ಕೆ ನಿಗದಿಯಾಗಿರುವುದರಿಂದ ಈ ಬದಲಾವಣೆಯು ಅವುಗಳಿಗೆ ಪರಿಣಾಮ ಬೀರುವುದಿಲ್ಲ.
2024-25ನೇ ಹಣಕಾಸು ವರ್ಷದಲ್ಲಿ ಮಾರಾಟವಾದ 4.3 ದಶಲಕ್ಷ ಪ್ರಯಾಣಿಕ ವಾಹನಗಳಲ್ಲಿ ಸಣ್ಣ ಕಾರುಗಳ ಪಾಲು ಕೇವಲ ಮೂರನೇ ಒಂದು ಭಾಗವಷ್ಟೇ ಇತ್ತು. ಇದು ಕೋವಿಡ್ ಪೂರ್ವ ಕಾಲದೊಂದಿಗೆ ಹೋಲಿದಾಗ ಶೇ.50ರಷ್ಟು ಕಡಿಮೆಯಾಗಿದೆ. 2025ರ ಮೊದಲ ನಾಲ್ಕು ತಿಂಗಳಲ್ಲಿ ಸಣ್ಣ ಕಾರುಗಳ ಪಾಲು ಶೇ.21ಕ್ಕೆ ಇಳಿದಿದೆ. ಇದರೊಂದಿಗೆ SUV ಮಾರಾಟದಲ್ಲಿ ಶೇ.10.2ರಷ್ಟು ಏರಿಕೆ ಕಂಡುಬಂದಿದೆ.
ಅವಂತಿಯಮ್ ಅಡ್ವೈಸರ್ಸ್ನ ವ್ಯವಸ್ಥಾಪಕ ವಿ.ಜಿ. ರಾಮಕೃಷ್ಣನ್ ಅವರ ಪ್ರಕಾರ, ಜಿಎಸ್ಟಿ ಶೇ.18ಕ್ಕೆ ಇಳಿಸಿದರೆ ಸಣ್ಣ ಕಾರುಗಳ ಎಕ್ಸ್-ಶೋರೂಂ ಬೆಲೆ ಶೇ.12ರಿಂದ ಶೇ.12.5ರಷ್ಟು ಕಡಿಮೆಯಾಗಲಿದೆ. ಇದು ಸುಮಾರು ₹20,000 ರಿಂದ ₹25,000 ರವರೆಗೆ ಕಡಿತವಾಗಬಹುದು ಎಂದಿದ್ದಾರೆ.

