ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಸಿಡಿಲು ಮಿಂಚಿನ ಹೊಡೆತಕ್ಕೆ ಬುರ್ಜ್ ಖಲೀಫಾ ನಲುಗಿದೆ. ಸೌದಿ ಅರೇಬಿಯಾದಲ್ಲಿ ಹಿಮಪಾತ ಮತ್ತು ಮಳೆ ಅಬ್ಬರದ ಮಧ್ಯೆ, ದುಬೈ ಮತ್ತು ಅಬುದಾಬಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ದಿಢೀರ್ ಭಾರೀ ಮಳೆಯಾಗಿದ್ದು ಸಿಡಿಲು, ಮಿಂಚು, ಮಳೆ, ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಭಾರಿ ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯ ಕಾರಣ ಸ್ಥಳೀಯ ಆಡಳಿತ ಜನರಿಗೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದೆ. ದುಬೈನಲ್ಲಿ ಸರ್ಕಾರಿ ನೌಕರರಿಗೆ ಮನೆಗಳಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.
ಶುಕ್ರವಾರ ಮುಂಜಾನೆಯಿಂದಲೇ, ದುಬೈ ಮತ್ತು ಅಬುದಾಬಿಯ ಪ್ರಮುಖ ಪ್ರದೇಶಗಳಲ್ಲಿ, ರಜೆ-ವಿಚಾರ ಕೇಂದ್ರಗಳು, ಕಡಲತೀರಗಳು, ಉದ್ಯಾನವನಗಳು ಮತ್ತು ಪ್ರವಾಸಿ ಸ್ಥಳಗಳು ತಾತ್ಕಾಲಿಕವಾಗಿ ಮುಚ್ಚಲಾದವು. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲವು ವಿಮಾನಗಳ ಪ್ರಯಾಣಕ್ಕೂ ವ್ಯತ್ಯಯ ಉಂಟಾಗಿದೆ.
ಹವಾಮಾನ ತಜ್ಞರು ಹೇಳುವಂತೆ, ಮರಭೂಮಿಯಲ್ಲಿ ಅಪರೂಪಕ್ಕೆ ಮಳೆಯಾಗುತ್ತಿರುವುದರಿಂದ, ದುಬೈ ಮತ್ತು ಅಬುದಾಬಿಯ ಪ್ರದೇಶಗಳಲ್ಲಿ ಅದರ ಪರಿಣಾಮ ಹೆಚ್ಚು ವಾಗಿದೆ. ಕಳೆದ ವರ್ಷವೂ ಇದೇ ರೀತಿಯ ಮಳೆಯು ನಗರಗಳಿಗೆ ಭಾರಿ ಪ್ರವಾಹ ಹಾಗೂ ಸಂತ್ರಸ್ತರನ್ನು ಉಂಟುಮಾಡಿತ್ತು. ಪ್ರವಾಸಿಗರು ಮತ್ತು ಸ್ಥಳೀಯರು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಹೊರಬರದಂತೆ, ಸುರಕ್ಷತೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




