ಮಂಗಳೂರು: ಜು.29ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಮಾಜಿ ಸಿಎಂ ಎಸ್.ಎಂ ಕೃಷ್ಣಾ ಅಳಿಯ, ಉದ್ಯಮಿ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಸಾವಿರಾರು ಮಂದಿಗೆ ಅನ್ನ ಹಾಕಿದ್ದ ದಣಿ ಜೀವಂತವಾಗಿ ಬರಲಿ ಅನ್ನೋ ಲಕ್ಷಾಂತರ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ.
ವ್ಯಾವಹಾರಿಕ ನಷ್ಟದಿಂದಾಗಿ ಬೇಸತ್ತು ಸುದೀರ್ಘ ಪತ್ರ ಬರೆದಿಟ್ಟು ಮೊನ್ನೆ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಮೃತದೇಹ ಇದೀಗ ಪತ್ತೆಯಾಗಿದೆ. ನೇತ್ರಾವತಿ ನದಿ ಹಿನ್ನೀರು ಪ್ರದೇಶ ಹೋಯ್ಗೆ ಬಜಾರ್ ಬಳಿ ಶವ ಪತ್ತೆಯಾಗಿದೆ. ನಿನ್ನೆ ಸಿದ್ಧಾರ್ಥ್ ಗಾಗಿ ನೇತ್ರಾವತಿ ನದಿಯಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ ಶವ ಹಿನ್ನೀರಿನ ಪ್ರದೇಶದವರೆಗೂ ಕೊಚ್ಚಿಕೊಂಡು ಹೋಗಿ ಬೆಳಗ್ಗೆ ಮೀನು ಹಿಡಿಯಲು ಬಂದ ಮೀನುಗಾರರ ಕಣ್ಣಿಗೆ ಪತ್ತೆಯಾಗಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅದು ಸಿದ್ಧಾರ್ಥ್ ರವರದ್ದೇ ಮೃತದೇಹ ಅಂತ ಖಚಿತಪಡಿಸಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆಗಾಗಿ ಸಿದ್ಧಾರ್ಥ್ ಮೃತದೇಹವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದು, ಕುಟುಂಬಸ್ಥರಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ.