ಬೆಂಗಳೂರು : ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಯಾರೂ ಊಹಿಸಲಾಗದ ತಿರುವು, ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಬದಲಾವಣೆಯ ಚರ್ಚೆಗಳ ನಡುವೆಯೇ ಖುದ್ದು ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೆಜ್ಜೆ ಇಡುತ್ತಿದ್ದಾರೆ. ಮೈಸೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈ ಹಿಡಿದು ನಾವಿಬ್ಬರು ಒಂದೇ ಎನ್ನುವ ಸಂದೇಶ ನೀಡಿದ್ದರು. ನಮ್ಮ ಸರ್ಕಾರ ಬಂಡೆಯಂತೆ ಭದ್ರವಾಗಿದೆ ಎನ್ನುವ ಮೂಲಕ ಪರಸ್ಪರ ನಗು ಬೀರಿದ್ದರು.
ಸಿದ್ದು ಈ ಜಾಣ ನಡೆಯ ಬಳಿಕ ಡಿಕೆ ಶಿವಕುಮಾರ್ ಕೂಡ ಸಿಎಂ ಅವರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದರು. ಇದಾದ ಬಳಿಕ ಸಿಎಂ ಹುದ್ದೆಯ ಬದಲಾವಣೆ ಇಲ್ಲ 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮಹತ್ವದ ರಾಜಕೀಯದಾಟ ಶುರು ಮಾಡಿದ್ದಾರೆ. ಇದೇ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್ ನನ್ನ ಬಳಿ ಬೇರೆ ಆಯ್ಕೆಗಳಿಲ್ಲ. ಅವರನ್ನು ಬೆಂಬಲಿಸುತೇತೆನೆ, ಅವರ ಜೊತೆಯಾಗಿ ನಿಲ್ಲುತ್ತೇನೆ ಎಂದು ಅಚ್ಚರಿ ಮೂಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಡುವೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಐತಿಹಾಸಿಕ ಕ್ಯಾಬಿನೆಟ್ ಸಭೆ ನಡೆದಿದೆ. ಸಚಿವ ಸಂಪುಟ ಸಭೆಯ ಮಧ್ಯೆ ಶಾಸಕರು ಹಾಗೂ ಸಚಿವರ ಜೊತೆ ಸಿದ್ದರಾಮಯ್ಯ ತೆಗೆಸಿಕೊಂಡ ಒಂದು ಫೋಟೋ ಭಾರಿ ಸದ್ದು ಮಾಡುತ್ತಿದೆ. ಇಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಈ ಫೋಟೋ ಬಗ್ಗೆಯೇ ಹೆಚ್ಚಿನ ಚರ್ಚೆಯಾಗುತ್ತಿದೆ. ಇಬ್ಬರೂ ನಾಯಕರು ಪರಸ್ಪರ ಮುನಿಸು ದೂರ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರೂ ಸಹ ನಾವು ತೋರಿಸೋ ಈ ಫೋಟೋನೇ ಎಲ್ಲವನ್ನೂ ಹೇಳುತ್ತದೆ.
ಮಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕುಳಿತಿದ್ದು ಕಾಣಿಸಿದರೆ, ಬಲಬದಿಯಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಕೃಷ್ಣ ಭೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಇದ್ದಾರೆ. ಎಡಬದಿಯಲ್ಲಿ ಡಾ.ಜಿ. ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಡಾ.ಎಂ.ಸಿ. ಸುಧಾಕರ್, ಕೆ.ಜೆ. ಜಾರ್ಜ್, ಎನ್ ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಭೈರತಿ ಸುರೇಶ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಇನ್ನಿತರ ಸಚಿವರು ಶಾಸಕರುಗಳನ್ನು ಕಾಣಬಹುದಾಗಿದೆ.
ಆದರೆ ಈ ಎಲ್ಲದರ ನಡುವೆಯೇ ಸಿಎಂ ಸಿದ್ದರಾಮಯ್ಯನವರ ಪಕ್ಕದಲ್ಲಿ ಕುಳಿತುಕೊಳ್ಳಬೇಕಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇಡೀ ಫೋಟೋದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಡಿಕೆ ಶಿವಕುಮಾರ್ ಅವರ ಅನುಪಸ್ಥಿತಿ ಇದೀಗ ಸಾಕನಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಫೋಟೋವನ್ನ ಸಿಎಂ ಸಿದ್ದರಾಮಯ್ಯನವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಉಭಯ ನಾಯಕರು ಹೇಳುತ್ತಿದ್ದರೂ ಅವರ ನಡುವಿನ ಮುನಿಸಿಗೆ ಈ ಫೋಟೋನೇ ಉತ್ತರವಾಗಿ ನಿಲ್ಲುತ್ತದೆ. ರಾಜಕೀಯದಲ್ಲಿನ ಪ್ರತಿಯೊಂದು ಹೇಳಿಕೆಗಳ ಹಿಂದೆ ಯಾವುದಾದರೂ ಒಂದು ಮಹತ್ವದ ಬೆಳವಣಿಗೆ ಇದ್ದೇ ಇರುತ್ತದೆ. ಅದರಂತೆಯೇ ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಬಂಧದ ಬಗ್ಗೆ ಫೋಟೋ ಒಂದು ಸಂದೇಶ ರವಾನಿಸಿದ್ದರೆ, ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.