ವಿಜಯಪುರ : ಬಿಜೆಪಿಯಿಂದ ಉಚ್ಚಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಕ್ಷದಿಂದ ಗೇಟ್ ಪಾಸ್ ನೀಡಿದ ಬಳಿಕ ರಾಜ್ಯ ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ನನ್ನನ್ನು ಮತ್ತೆ ಗೌರವಯುತವಾಗಿ ಹೈಕಮಾಂಡ್ ನಾಯಕರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ ಇದೇ ವಿಚಾರಕ್ಕೆ ನಗರದಲ್ಲಿಂದು ಮಾತನಾಡಿರುವ ಅವರು, ನನ್ನ ಉಚ್ಚಾಟನೆಯ ಬಳಿಕ ಬಿಜೆಪಿಯವರು ನನ್ನನ್ನು 18 ವರ್ಷ ಸೇರಿಸಿಕೊಳ್ಳಬಾರದು. ಈಗ ಬಿಜೆಪಿಯಿಂದ ನಾನು ಹೊರಗೆ ಇದ್ದೀನಿ, ಆದರೆ ನೋಡಿ 2 ತಿಂಗಳಲ್ಲಿ ಮತ್ತೆ ಅವರೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಏನು ಮಾಡೋದು? ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ನೋಡಿ ನಮ್ಮ ಬಳಿ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲವಾದರೆ ಅಪ್ಪಾಜಿ ಎನ್ನುತ್ತ ಯಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇಷ್ಟು ದಿನಗಳ ಕಾಲ ಬಿಜೆಪಿಗೆ ಸೇರುವ ಬಗ್ಗೆ ಸ್ಪಷ್ಟ ಮಾಹಿತಿ ಹೊರಹಾಕದಿದ್ದರೂ ಯತ್ನಾಳ್, ಮನಸ್ಸು ಮಾತ್ರ ಕೇಸರಿ ಪಾಳಯದಲ್ಲಿಯೇ ಇತ್ತು. ರಾಜ್ಯ ಮಟ್ಟದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯೇಂದ್ರ ನಾಯಕತ್ವದ ವಿರುದ್ಧ ಬೆಂಕಿಯುಗುಳುತ್ತಿರುವ ಫೈರ್ ಬ್ರ್ಯಾಂಡ್ ಇತ್ತೀಚಿಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರದಲ್ಲೇ ಶುಭ ಸುದ್ದಿ ಎಂದು ಪೋಸ್ಟ್ ಮಾಡಿ ಭಾರೀ ಕುತೂಹಲ ಹುಟ್ಟಿಸಿದ್ದರು. ಆದರೆ ಆ ಪೋಸ್ಟ್ನ ಅಸಲಿಯತ್ತು ಇದೀಗ ತಿಳಿದು ಬರುತ್ತಿದ್ದು, ಬಿಜೆಪಿ ಸೇರ್ಪಡೆಯ ಮೊದಲ ಭಾಗವಾಗಿಯೇ ಯತ್ನಾಳ್ ಆ ಪೋಸ್ಟ್ ಹಂಚಿಕೊಂಡಿದ್ದರು ಎನ್ನಲಾಗುತ್ತಿದೆ. ಇನ್ನೂ ಒಂದು ವೇಳೆ ಯತ್ನಾಳ್ ಬಿಜೆಪಿಗೆ ಮರು ಸೇರ್ಪಡೆಯಾದರೆ ವಿಜಯೇಂದ್ರ ಟೀಂ ಯಾವ ನಡೆಯನ್ನು ಅನುಸರಿಸುತ್ತದೆ ಎನ್ನುವುದು ಮುಖ್ಯವಾಗಿದೆ.