Wednesday, July 2, 2025

Latest Posts

ಕರ್ನಾಟಕದಲ್ಲಿ ಬಿ.ವೈ. ವಿಜಯೇಂದ್ರ ಬದಲಾವಣೆ?

- Advertisement -

ಬಹು ನಿರೀಕ್ಷಿತ ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಘಟಕಗಳ ಅಧ್ಯಕ್ಷರ ನೇಮಕಕ್ಕೆ ಕೇಸರಿ ನಾಯಕರು ಹಸಿರು ನಿಶಾನೆ ತೋರಿದ್ದಾರೆ. ಪಕ್ಷಕ್ಕೆ ಲಾಭವಾಗುವ ನಿಟ್ಟಿನಲ್ಲಿ ಅಳೆದು-ತೂಗಿ ಲೆಕ್ಕಾಚಾರಗಳನ್ನು ಹಾಕುವ ಮೂಲಕ ಈಗಾಗಲೇ 16 ರಾಜ್ಯಗಳಿಗೆ ಪಕ್ಷದ ಅಧ್ಯಕ್ಷರ ನೇಮಕ ಮಾಡಲಾಗಿದೆ. ಈ ಮಹತ್ವದ ಬೆಳವಣಿಗೆಯಲ್ಲಿಯೇ ತೆಲಂಗಾಣ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಸ್ಫೋಟವಾಗಿದೆ. ಫೈರ್ ಬ್ರ್ಯಾಂಡ್‌ ಶಾಸಕ ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬೆಳವಣಿಗೆಯ ಮಧ್ಯೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆ ಜೋರಾಗಿದೆ. ಆದರೆ ಬಿಜೆಪಿಗೆ ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಮುಂದುವರೆಸುವ ಮನಸ್ಥಿತಿ ಹೈಕಮಾಂಡ್ ನಾಯಕರಲ್ಲಿದೆ. ಈ ಕುರಿತು ಈಗಾಗಲೇ ಬೇಕಾದ ಮಾಹಿತಿ ಹಾಗೂ ವಿಜಯೇಂದ್ರ ಅವರ ಕಾರ್ಯವೈಖರಿಯನ್ನು ಗಮನಿಸಿರುವ ಪಕ್ಷದ ನಾಯಕರು ಅವರನ್ನು ಬದಲಾಯಿಸುವ ಗೋಜಿಗೆ ಹೋಗುವ ಸಾಧ್ಯತೆಯಿಲ್ಲ. ಆದರೆ ಪಕ್ಷದಲ್ಲಿ ವಿಜಯೇಂದ್ರ ನಾಯಕತ್ವದ ವಿರುದ್ಧ ರೆಬಲ್ ಶಾಸಕರು ಆಗಾಗ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇದರಿಂದ ರಾಜ್ಯ ಬಿಜೆಪಿಯ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದೆ. ಸೋಮವಾರವಷ್ಟೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಮಿಜೋರಾಮ್ ಹಾಗೂ ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಿಗೆ ಪಕ್ಷದ ಅಧ್ಯಕ್ಷರನ್ನು ಘೋಷಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಂಗಳವಾರ ಅಥವಾ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಹೊರಬೀಳಲಿದ್ದು, ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಇನ್ನೂ ರಾಜ್ಯದಲ್ಲಿಯೂ ಪಕ್ಷದ ಅಧ್ಯಕ್ಷರ ಹುದ್ದೆಯ ರೇಸ್​ನಲ್ಲಿ ಮಾಜಿ ಸಚಿವ ಮುರುಗೇಸ್ ನಿರಾಣಿ, ಶಾಸಕ ಸುನೀಲ್ ಕುಮಾರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರುಗಳ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಈಗಾಗಲೇ ಹುದ್ದೆಯಲ್ಲಿರುವ ವಿಜಯೇಂದ್ರ ಅವರನ್ನು ಬದಲಾಯಿಸದಂತೆ ವಿವಿಧ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರುಗಳು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಬಿಜೆಪಿ ನಾಯಕರು ಈ ಬಗ್ಗೆಯೂ ಗಮನಹರಿಸಲಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯವಾಗಿ ಬಿಜೆಪಿಯಲ್ಲಿನ ಸಂವಿಧಾನದ ಪ್ರಕಾರ ಒಟ್ಟು 37 ಸಂಘಟನಾ ರಾಜ್ಯಗಳ ಪೈಕಿ ಕನಿಷ್ಠ 19 ರಾಜ್ಯಗಳಿಗೆ ಪಕ್ಷದ ಅಧ್ಯಕ್ಷರ ನೇಮಕವಾಗಬೇಕು. ಇದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಪ್ರಕ್ರಿಯೆಗಳು ಇನ್ನಷ್ಟು ಚುರುಕುಗೊಳ್ಳಲಿವೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ನಾಯಕರು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಪಕ್ಷದ ನಾಯಕತ್ವಕ್ಕೆ ಬಲ ತುಂಬಲಿದ್ದಾರೆ.

- Advertisement -

Latest Posts

Don't Miss