Hubli News: ಹುಬ್ಬಳ್ಳಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಶಾಸಕ ಎನ್.ಹೆಚ್.ಕೊನರೆಡ್ಡಿ ಮಾತನಾಡಿದ್ದು, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಹೀಗಾಗಿ ಕೋರ್ಟ್’ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್’ನಲ್ಲಿ ಪ್ರಶ್ನೆ ಮಾಡಲಾಗುವುದು. ಈ ಬಗ್ಗೆ ಸಿದ್ದರಾಮಯ್ಯ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಭಯಪಡುವ ಪ್ರಶ್ನೆಯಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರ ನೇರವಾಗಿ ಮದ್ಯೆ ಪ್ರವೇಶಿಸಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ವಿರುದ್ಧದ ಮುಖ್ಯಮಂತ್ರಿಗಳು ಇರಬಾರದು ಎಂಬ ಸಂಚು ರೂಪಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.
ಇದೀಗ ದೆಹಲಿಯಲ್ಲಿ ನಡೆದ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಬಿಜೆಪಿ ಮಾಡುತ್ತಿದೆ. ಸಿಎಂ ಅವರನ್ನು ಕೆಲಸ ಮಾಡಲು ದೆಹಲಿಯಲ್ಲಿ ಬಿಡಲಿಲ್ಲ. ಬಿಜೆಪಿಯವರಿಗೆ ಯಾವೊಂದು ರಾಜ್ಯದಲ್ಲಿ ಪವರ್ ಫುಲ್ ನಾಯಕ ಇರಬಾರದು, ಮೋದಿ ಅವರ ವಿರುದ್ಧ ಮಾತನಾಡುವ ಯಾವೊಬ್ಬ ನಾಯಕ ಇರಬಾರದೆಂಬ ಅಜೆಂಡ್ ವಿದೆ. ಇದ್ದರೆ ಅಂತವರ ವಿರುದ್ಧ ಷಡ್ಯಂತ್ರ ರೂಪಿಸುವುದು ಅವರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಸದ್ಯ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ತನಿಖೆಯನ್ನು ಎದುರಿಸುತ್ತೇವೆ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಶಾಸಕ ಎನ್.ಹೆಚ್.ಕೊನರೆಡ್ಡಿ ಹೇಳಿದರು.




