ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ ಈಗ ಭದ್ರತಾ ಸಂಸ್ಥೆಗಳಿಗೂ ತಲೆನೋವಾಗುತ್ತಿದೆ. ಎನ್ಐಎ ತನಿಖೆ ಆರಂಭಿಸಿದ ತಕ್ಷಣವೇ ಬೆಚ್ಚಿಬೀಳಿಸುವ ಸತ್ಯಗಳು ಬೆಳಕಿಗೆ ಬಂದಿವೆ. ಕೆಂಪುಕೋಟೆ ಮೆಟ್ರೋ ಬಳಿ ಕಾರು ಸ್ಫೋಟಿಸಿದ ಭಯೋತ್ಪಾದಕರು, 26/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿಯ ವಿವಿಧ ಕಡೆಗಳಲ್ಲಿ ಸರಣಿ ಸ್ಫೋಟ ಮಾಡಲು ಯೋಜಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ತನಿಖೆಯಲ್ಲಿ ಶಂಕಿತ ಡಾ. ಉಮರ್ ನಬಿಗೆ ಸೇರಿದ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಹರಿಯಾಣದ ಖಂಡವಾಲಿ ಗ್ರಾಮದಲ್ಲಿ ಪತ್ತೆಯಾಗಿದೆ. ಫರಿದಾಬಾದ್ನಲ್ಲಿ ಪತ್ತೆಯಾದ ಸ್ಫೋಟಕಗಳು ಹಾಗೂ ಸಾಕ್ಷ್ಯಗಳು ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಕಾರ್ಯನಿರ್ವಹಿಸುತ್ತಿದ್ದುದನ್ನು ಸೂಚಿಸುತ್ತವೆ.
ಡಾ. ಉಮರ್, ಡಾ. ಶಾಹೀನ್ ಸಯೀದ್ ಮತ್ತು ಸಹಚರ ವೈದ್ಯರು 26 ಲಕ್ಷ ರೂಪಾಯಿ ಸಂಗ್ರಹಿಸಿ ಸ್ಫೋಟಕ ತಯಾರಿಸಲು ಸುಮಾರು 26 ಕ್ವಿಂಟಾಲ್ NPK ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಖರೀದಿಸಿದ್ದರು. ಪುಲ್ವಾಮಾದ ಮೂಲದ ಉಮರ್ ನಬಿ, ನವೆಂಬರ್ 10ರಂದು ಕೆಂಪುಕೋಟೆ ಬಳಿ ನಡೆದ ಸ್ಫೋಟದ ವೇಳೆ ಕಾರು ಚಲಾಯಿಸುತ್ತಿದ್ದ. ಎನ್ಐಎ ಇದೀಗ ಹಣಕಾಸು ಮತ್ತು ಪೂರೈಕೆದಾರರ ಜಾಲದ ಮೇಲೆ ತನಿಖೆ ಮುಂದುವರಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

